ಹೊಸಕೋಟೆ : ಹಾಲು ಉತ್ಪಾದಕರ ಹಿತವನ್ನು ಕಾಯಲು ಬಮೂಲ್ ಬದ್ದವಾಗಿದ್ದು,ಮುಂದಿನ ದಿನಗಳಲ್ಲಿ ಬಮೂಲ್ ವತಿಯಿಂದ ಉತ್ಪಾದಕ ಸದಸ್ಯರು ಮತ್ತು ಅವರ ಕುಟುಂಬದವರಿಗೆ ನೀಡುವ ವೈದ್ಯಕೀಯ ಹಾಗೂ ಮರಣ ಪರಿಹಾರ ಮೀಸಲಿಡುವ ಹಣ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಬಮೂಲ್ ನಿರ್ದೇಶಕ ಬಿ.ವಿ ಸತೀಶ್ ಗೌಡ ಹೇಳಿದ್ದಾರೆ.
ತಾಲೂಕಿನ ಬೆಂಡಿಗಾನಹಳ್ಳಿಯಲ್ಲಿ ಬಮೂಲ್ ಕಲ್ಯಾಣ ಟ್ರಸ್ಟ್ವತಿಯಿಂದ ಹಮ್ಮಿಕೊಂಡಿದ್ದ ಹಾಲು ಉತ್ಪಾದಕ ಸದಸ್ಯರಿಗೆ ವೈದ್ಯಕೀಯ ವೆಚ್ಚ ಪರಿಹಾರ ಹಾಗೂ ಸದಸ್ಯರ ಕುಟುಂಬಗಳಿಗೆ ಮರಣ ಪರಿಹಾರ ಚೆಕ್ ವಿತರಣೆ ಕರ‍್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದೆ. ಈ ಹಿನ್ನಲೆಯಲ್ಲಿ ರಾಸುಗಳಿಗೆ ನೀಡುವ ಮೇವು, ಹಿಂಡಿ, ಬೂಸಾ, ಫೀಡು, ಮೇವು ಬೆಳೆಯಲು ಬಳಸುವ ಕಾಂಪ್ಲೇಕ್ಸ್ ಬೆಲೆ ದುಬಾರಿಯಾಗಿದೆ. ರಾಸುಗಳಿಗೆ ನೀಡುವ ಹಿಂಡಿ ೧೬೫೦ ರೂ.ಆಗಿದೆ. ರಾಸು ಸಾಕಣಿದಾರರು ಬೆಲೆ ಏರಿಕೆಯಿಂದಾಗಿ ತತ್ತರಿಸಿದ್ದಾರೆ. ರಾಸುಗಳಿಗೆ ಮೇವು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಉತ್ಪಾದನೆ ವೆಚ್ಚ ದುಬಾರಿಯಾಗುತ್ತಿರುವ ಕಾರಣ ಹಾಲಿನ ದರವನ್ನು ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.
ಬಮೂಲ್ ಕಲ್ಯಾಣ ಟ್ರಸ್ಟ್ ವತಿಯಿಂದ ಹಾಲು ಉತ್ಪಾದಕರ ಸದಸ್ಯರಿಗೆ ವೈದ್ಯಕೀಯ ವೆಚ್ಚ ಪರಿಹಾರ,ಸದಸ್ಯರ ಮರಣ ನಂತರ ಅವರ ಕುಟುಂಬದವರಿಗೆ ನೆರವು ಪರಿಹಾರ ಹಾಗೂ ಸದಸ್ಯರ ಮಕ್ಕಳ ವಿದ್ಯಾಬ್ಯಾಸ ಪ್ರೋತ್ಸಾಹ ಧನ ವಿತರಣೆ ಕರ‍್ಯ ಮಾಡಲಾಗುತ್ತಿದೆ. ೨೦೨೫-೨೬ನೇ ಸಾಲಿನಲ್ಲಿ ಹೊಸಕೋಟೆ ತಾಲೂಕಿನಾದ್ಯಂತ ಹಾಲು ಉತ್ಪಾದಕ ೬೦ ಸದಸ್ಯರಿಗೆ ವೈದ್ಯಕೀಯ ಪರಿಹಾರವಾಗಿ ೧೧.೫೦ ಲಕ್ಷ, ೭೦ ವರ್ಷ ಮೇಲ್ಪಟ್ಟ ೧೩ ಸದಸ್ಯ ಕುಟುಂಬಗಳಿಗೆ ಮರಣ ಪರಿಹಾರ ೩.೬೦ ಲಕ್ಷ,೬ ಜನ ಬಮೂಲ್ ಸದಸ್ಯರ ಕುಟುಂಬಗಳಿಗೆ ಮರಣ ಪರಿಹಾರವಾಗಿ ತಲಾ ೧ ಲಕ್ಷದಂತೆ ೬ ಲಕ್ಷ, ಕುಡಿಯುವ ನೀರು ಘಟಕ, ಬಸ್ ನಿಲ್ದಾಣ,ವಿದ್ಯುತ್ ದೀಪ ಇತ್ಯಾದಿ ಸಾಮಾಜಿಕ ಕರ‍್ಯಗಳಿಗೆ ೧೫ ಲಕ್ಷ , ೨೯೮ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವಾಗಿ ೧೧ ಲಕ್ಷ ಪ್ರೋತ್ಸಾಹ ಧನ ವಿತರಣೆ ಮಾಡಲಾಗಿದೆ.ಸದಸ್ಯರ ವೈದ್ಯಕೀಯ,ಮರಣ ಪರಿಹಾರ ಇತ್ಯಾದಿ ಕರ‍್ಯಗಳಿಗೆ ಮೀಸಲಿಡುವ ಹಣವನ್ನು ೧ ಕೋಟಿಗೆ ಏರಿಕೆ ಮಾಡುತ್ತೇವೆ ಎಂದರು.
ಬಾಕ್ಸ್
ಬಮೂಲ್ ನಿರ್ದೇಶಕ ಬಿ.ವಿ ಸತೀಶ್‌ಗೌಡರ ಕೋಟಾದಡಿಯಲ್ಲಿ ಹೊಸಕೋಟೆ ತಾಲೂಕಿನ ವಾಬಸಂದ್ರ, ತಿಮ್ಮಪ್ಪನಹಳ್ಳಿ,ನೆಲವಾಗಿಲು,ಸೋಲೂರು, ಚಿಕ್ಕನಲ್ಲೂರಹಳ್ಳಿ,ಆಲಪ್ಪನಹಳ್ಳಿ, ಹೊಸಕೋಟೆ ಮೇಲಿನ ಪೇಟೆ, ಒಳಗೆರೆಪುರ, ಅತ್ತಿಬೆಲೆ, ಬೆಂಡಿಗಾನಹಳ್ಳಿ, ಬೊಮ್ಮನ ಬಂಡೆ ಸೇರಿ ಒಟ್ಟು ೧೨ ಮಂದಿಗೆ ವೈದ್ಯಕೀಯ ಪರಿಹಾರ ಚೆಕ್ ಹಾಗೂ ಯಳಚಹಳ್ಳಿ, ಚಿಕ್ಕನಲ್ಲೂರಹಳ್ಳಿ, ಚಿಕ್ಕಗಟ್ಟಿಗನೆಬ್ಬೆ ಗ್ರಾಮಗಳ ೩ ಜನ ಸಕ್ರಿಯ ಸದಸ್ಯರ ಮರಣ ಪರಿಹಾರ ಚೆಕ್‌ಗಳನ್ನು ವಿತರಣೆ ಮಾಡಲಾಯಿತು.
ಉಪವ್ಯವಸ್ಥಾಪಕ ಸಂತೋಷ್,ವಿಸ್ತಾರಣಾಧಿಕಾರಿ ವಿದ್ಯಾ,ಆನಂದ್,ರಮೇಶ್,ರಘನಾಥ್,ಪವಿತ್ರ,ವಿನಯ್,ಬಮೂಲ್ ಟ್ರಸ್ಟ್ ನವೀನ್ ಹಾಜರಿದ್ದರು.

