
ಹೊಸಕೋಟೆ : ಶ್ರಮಿಕ ವರ್ಗದವರ ಮಕ್ಕಳ ಶೈಕ್ಷಣಿಕಾಭಿವೃದ್ಧಿಗೆ ಶ್ರಮಿಕ ವಸತಿ ಶಾಲೆ ಸಹಕಾರಿಯಾಗಲಿದೆ ಎಂದು ಶಾಸಕ ಶರತ್ ಕುಮಾರ್ ಬಚ್ಚೆಗೌಡರು ಹೇಳಿದ್ದಾರೆ.
ಹೊಸಕೋಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಜಿಲ್ಲಾ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಶ್ರಮಿಕ ವಸತಿಶಾಲೆ ಕಟ್ಟಡ ಸಮುಚ್ಚಯದ ಶಂಕು ಸ್ಥಾಪನಾ ಕಾರ್ಯಕ್ರಮ ಹಾಗೂ ಅರ್ಹ ಕಟ್ಟಡ ಕಾರ್ಮಿಕ ಫಲಾನುಭವಿಗಳಿಗೆ ಸುರಕ್ಷತಾ ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲೇ ಪ್ರಥಮವಾಗಿ ಗಿಗ್ ಕಾರ್ಮಿಕರ ರಕ್ಷಣೆಗಾಗಿ ನಮ್ಮ ರಾಜ್ಯ ಸರಕಾರ ಹೊಸ ಕಾನೂನು ಜಾರಿಗೆ ತಂದಿದೆ. ಜತೆಗೆ ಕಾರ್ಮಿಕರ ಕನಿಷ್ಠ ವೇತನವನ್ನು ಶೇ. ೬೦ ಏರಿಕೆ ಮಾಡಿ ಆದೇಶ ಮಾಡುವ ಮೂಲಕ ಕಾರ್ಮಿಕರಿಗೆ ವೇತನ ಭದ್ರತೆ ಒದಗಿಸಿದೆ. ೧೦ ಎಕರೆ ಜಾಗದಲ್ಲಿ ೩೫ ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶ್ರಮಿಕ ವಸತಿ ಶಾಲೆ ಕಟ್ಟಡ ಸಮುಚ್ಚಯ ಕಾಮಗಾರಿಯು ಮುಂದಿನ ೧೫ ತಿಂಗಳೊಳಗೆ ಪೂರ್ಣಗೊಂಡು ಶ್ರಮಿಕರ ಮಕ್ಕಳಿಗೆ ಜ್ಞಾನಾರ್ಜನೆ ಮಾಡಲು ನೆರವಾಗಲಿದೆ. ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ೩೨ ಸಾವಿರಕ್ಕೂ ಹೆಚ್ಚು ಅರ್ಹ ಕಾರ್ಮಿಕರಿಗೆ ಇಲಾಖೆಯ ವಿವಿಧ ಯೋಜನೆಗಳಡಿ ಸಹಾಯಧನ ಹಾಗೂ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.
ಕಾರ್ಮಿಕರ ಕಲ್ಯಾಣ ಮಂಡಳಿ ಜಂಟಿ ಕಾರ್ಯದರ್ಶಿ ಉಮೇಶ್ ಎ.ಹೆಚ್ ಅವರು ಮಾತನಾಡಿ, ಕಾರ್ಮಿಕರ ಮಕ್ಕಳಿಗೆ ಉತ್ಕೃಷ್ಟ ದರ್ಜೆಯ ಶಿಕ್ಷಣ ಸಿಗಬೇಕೆನ್ನುವ ಸದುದ್ದೇಶದಿಂದಾಗಿ ರಾಜ್ಯ ಸರಕಾರವು ರಾಜ್ಯದ ೩೧ ಜಿಲ್ಲೆಗಳಲ್ಲಿ ಶ್ರಮಿಕ ವಸತಿ ಶಾಲೆಗಳು ಸ್ಥಾಪಿಸುತ್ತಿದೆ. ಕಾರ್ಮಿಕ ಇಲಾಖೆಯು ಶ್ರಮಿಕರ ಹಾಗೂ ಅವರ ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಅಪಘಾತ ಪರಿಹಾರ, ಶೈಕ್ಷಣಿಕ ಸಹಾಯ ಧನ, ಹೆರಿಗೆ ಭತ್ಯೆ, ಪಿಂಚಣಿ ಸೇರಿದಂತೆ ಹಲವಾರು ಯೋಜನೆ ಜಾರಿಗೆ ತಂದಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಇಲಾಖೆಯಿಂದ ಕಾರ್ಮಿಕರಿಗೆ ಮದುವೆ ಸಹಾಯ ಧನವಾಗಿ ೬೦ ಸಾವಿರ, ಅನುಗ್ರಹ ರಾಶಿ ಯೋಜನೆಯಡಿ ಅಂತಿಮ ಸಂಸ್ಕಾರಕ್ಕೆ ೧.೫೦ ಲಕ್ಷ ಸಹಾಯಧನ, ಸುರಕ್ಷತಾ ಕಿಟ್, ತ್ರಿಚಕ್ರ ವಾಹನ ವಿತರಣೆ ಸೇರಿದಂತೆ ಇಲಾಖೆ ಸೌಲಭ್ಯಗಳನ್ನು ೧೨೦೦ ಕ್ಕೂ ಹೆಚ್ಚು ಮಂದಿ ಕಾರ್ಮಿಕರಿಗೆ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಮುಖಂಡ ಬಿ.ಎನ್ ಗೋಪಾಲಗೌಡ,ಟಿಎಪಿಎಂಎಸ್ ಅಧ್ಯಕ್ಷ ಸುರೇಶ್, ಬಮೂಲ್ ನಿರ್ದೇಶಕ ಬಿ.ವಿ ಸತೀಶ್‌ಗೌಡ,ಉದ್ಯಮಿ ಬಿ.ವಿ ಬೈರೇಗೌಡ,ತಾಪಂ ಮಾಜಿ ಅಧ್ಯಕ್ಷ ಬಿ.ವಿ ರಾಜಶೇಖರ್ ಗೌಡ, ಬಿಎಂಎರ‍್ಡಿ ಸದಸ್ಯ ಡಾ.ಹೆಚ್.ಎಂ ಸುಬ್ಬರಾಜ್,ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಚ್ಚೆಗೌಡ, ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯರಾದ ಶ್ರೀಯಾನ್ಸ್ ಕುಮಾರ್ ಜೈನ್, ಹೆಚ್.ಜಿ ರಮೇಶ್, ಜಾನಿ ಕೆ.ಪಿ, ಜಯಲಕ್ಷ್ಮೀ, ಜಿಲ್ಲಾ ಕಾರ್ಮಿಕ ಅಧಿಕಾರಿಯಾದ ಮುಕ್ಕುಂದ,ತಾಲೂಕು ಅಧಿಕಾರಿ ಯತೀಶ್ ಕುಮಾರ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಕೋಟ್
ಹಿಂದೆ ಕಾರ್ಮಿಕ ಸಚಿವರಾಗಿದ್ದ ಬಿ.ಎನ್ ಬಚ್ಚೇಗೌಡರ ದೂರದೃಷ್ಟಿಯಿಂದ ಜಾರಿ ಮಾಡಿದ ಯೋಜನೆಗಳ ಫಲವಾಗಿ ಬೇಗೂರಿನಲ್ಲಿ ದೇಶದಲ್ಲಿಯೇ ಮಾದರಿಯಾಗುವಂತ ಶ್ರಮಿಕ ವಸತಿ ಶಾಲೆ ೩೪ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಬೇಗೂರಿನಲ್ಲಿ ಕಾರ್ಮಿಕರಿಗೆ ಇಎಸ್‌ಐ ಆಸ್ಪತ್ರೆ ನಿರ್ಮಿಸುವ ಕನಸು ಬಚ್ಚೇಗೌಡರು ಕಂಡಿದ್ದರು.ಕಾರ್ಮಿಕರ ಮಕ್ಕಳಿಗೆ ಶ್ರಮಿಕ ವಸತಿ ಶಾಲೆಯಾಗಿದ್ದು ಸಾವಿರಾರು ಮಕ್ಕಳ ಜೀವನ ರೂಪಿಸಲು ಸಹಕಾರಿಯಾಗಲಿದೆ- ಶರತ್ ಬಚ್ಚೇಗೌಡರು | ಶಾಸಕರು


