ಹೊಸಕೋಟೆ : ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆಯನ್ನು ತಾಲೂಕಿನಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ಜನರು ಸಹಕಾರ ನೀಡಬೇಕು ಎಂದು ಮತದಾರರ ನೋಂದಣಾಧಿಕಾರಿ ಶಿವಕುಮಾರ್ ಮನವಿ ಮಾಡಿದರು.
ತಾಲೂಕು ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆಯ ಪ್ರಮುಖ ಉದ್ದೇಶ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದು ಹಾಗೂ ಅನರ್ಹ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವುದಾಗಿದೆ. ಮರಣ ಹೊಂದಿರುವವರು, ಶಾಶ್ವತವಾಗಿ ಸ್ಥಳಾಂತರಗೊ0ಡವರು, ವಿವಾಹದ ನಂತರ ಬೇರೆ ಕ್ಷೇತ್ರಕ್ಕೆ ತೆರಳಿರುವವರು ಹಾಗೂ ಒಂದಕ್ಕಿ0ತ ಹೆಚ್ಚು ಕಡೆ ಹೆಸರು ಹೊಂದಿರುವ ಡುಪ್ಲಿಕೇಟ್ ಮತದಾರರ ಹೆಸರನ್ನು ಪರಿಶೀಲನೆಯ ನಂತರ ಪಟ್ಟಿಯಿಂದ ತೆಗೆದು ಹಾಕಲಾಗುವುದು. ಮತದಾರರ ಪಟ್ಟಿಯನ್ನು ಸ್ಥಗಿತಗೊಳಿಸಿ ಹೊಸದಾಗಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ೨೦೨೫ರ ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬ ಮತದಾರರನ್ನು ಅವರ ಕುಟುಂಬ ಸದಸ್ಯರೊಂದಿಗೆ ಜೋಡಿಸುವ ಪ್ರಜನಿ ಮ್ಯಾಪಿಂಗ್ ಕಾರ್ಯ ಕೈಗೊಳ್ಳಲಾಗಿದೆ ಹೇಳಿದರು.
ತಹಸೀಲ್ದಾರ್ ಶೀತಲ್ ಟಿ.ಎಸ್ ಮಾತನಾಡಿ, ತಾಲೂಕಿನಲ್ಲಿ ಒಟ್ಟು ೨,೪೬,೧೪೩ ಮತದಾರರಿದ್ದು, ೨೯೩ ಮತಗಟ್ಟೆಗಳಿವೆ. ೨೪೪ ಗ್ರಾಮೀಣ ಹಾಗೂ ೪೯ ನಗರ ಮತಗಟ್ಟೆಗಳಿವೆ. ಇದುವರೆಗೆ ೨,೨೧,೫೦೦ಕ್ಕೂ ಹೆಚ್ಚು ಮತದಾರರ ಪ್ರಜನಿ ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ. ಯಾವುದೇ ಮತದಾರರ ಹೆಸರನ್ನು ಸಮರ್ಪಕ ಪರಿಶೀಲನೆ ಹಾಗೂ ಅವಕಾಶ ನೀಡದೆ ಪಟ್ಟಿಯಿಂದ ತೆಗೆದುಹಾಕುವುದಿಲ್ಲ. ಆಕ್ಷೇಪಣೆಗಳಿದ್ದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದು, ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಹೊಸಕೋಟೆ ಕ್ಷೇತ್ರವು ಪ್ರಜನಿ ಮ್ಯಾಪಿಂಗ್ ಕಾರ್ಯದಲ್ಲಿ ಉತ್ತಮ ಸಾಧನೆ ತೋರಿ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿದೆ. ಆದರೆ, ರಾಜ್ಯ ಹಾಗೂ ವಿಭಾಗ ಮಟ್ಟದಲ್ಲಿ ಇನ್ನಷ್ಟು ಪ್ರಗತಿ ಸಾಧಿಸುವ ಉದ್ದೇಶದಿಂದ ಮ್ಯಾಪಿಂಗ್ ಕಾರ್ಯವನ್ನು ತೀವ್ರಗೊಳಿಸಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.
ಜೂ. ೧೯ರೊಳಗೆ ಪ್ರಜನಿ ಮ್ಯಾಪಿಂಗ್ ಪೂರ್ಣಗೊಳ್ಳಲಿದ್ದು, ಜೂ. ೨೦ರಿಂದ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಲಿದೆ. ಜೂ. ೨೦ರಿಂದ ೨೯ರವರೆಗೆ ಬೂತ್ ಮಟ್ಟದ ಅಧಿಕಾರಿಗಳಿಗೆ ವಿಶೇಷ ತರಬೇತಿ ನೀಡಲಾಗುವುದು. ನಂತರ ಜೂ. ೩೦ರಿಂದ ಜುಲೈ ೨೯ರವರೆಗೆ ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಣೆ ನಡೆಸಲಿದ್ದಾರೆ. ಪ್ರತಿ ಕುಟುಂಬಕ್ಕೂ ವಿಶೇಷ ನಮೂನೆಗಳನ್ನು ವಿತರಿಸಿ ಮತದಾರರ ವಿವರಗಳನ್ನು ಸಂಗ್ರಹಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಇಒ ಮುನಿಯಪ್ಪ,ಬಿಇಒ ಪದ್ಮನಾಭ್,ನಗರಸಭೆ ಆಯುಕ್ತ ನೀಲಲೋಚನ ಪ್ರಭು,ಹಾಜರಿದ್ದರು

