
ದೇವನಹಳ್ಳಿ: ಅಣ್ಣೇಶ್ವರ ಗ್ರಾ.ಪಂ ನಲ್ಲಿ ಶಿಕ್ಷಣ ಫೌಂಡೇಶನ್ ವತಿಯಿಂದ ಅತಿಥಿ ಶಿಕ್ಷಕರಿಗೆ ಹೆಚ್ಚುವರಿ ಸಹಾಯಧನ ವಿತರಣೆ ಹಾಗೂ ತರಬೇತಿ ಕಾರ್ಯಕ್ರಮ
ದೇವನಹಳ್ಳಿ: ತಾಲೂಕಿನ ಅಣ್ಣೇಶ್ವರ ಗ್ರಾಮ ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ಇಂದು ಶಿಕ್ಷಣ ಫೌಂಡೇಶನ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಅತಿಥಿ ಶಿಕ್ಷಕರಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮವನ್ನು ಗಣ್ಯರು ಜಂಟಿಯಾಗಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಸರ್ಕಾರಿ ಪ್ರೌಢ ಶಾಲೆಗಳ (High School) ಅತಿಥಿ ಶಿಕ್ಷಕರಿಗೆ ತಲಾ 8,000 ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ (GHPS) ಅತಿಥಿ ಶಿಕ್ಷಕರಿಗೆ ತಲಾ 5,000 ರಂತೆ ಹೆಚ್ಚುವರಿ ಸಹಾಯಧನವನ್ನು ಘೋಷಿಸಿ, ವಿತರಿಸಲು ಕ್ರಮ ಕೈಗೊಳ್ಳಲಾಯಿತು. ಇದು ಶಿಕ್ಷಕರ ಕರ್ತವ್ಯ ನಿಷ್ಠೆಗೆ ಪ್ರೋತ್ಸಾಹ ನೀಡಿದಂತಾಗಿದೆ.
ಪ್ರಮುಖ ಗಣ್ಯರ ಉಪಸ್ಥಿತಿ:
ಈ ಕಾರ್ಯಕ್ರಮದ ಉದ್ಘಾಟನೆ ಹಾಗೂ ಅಧ್ಯಕ್ಷತೆಯನ್ನು ಅಣ್ಣೇಶ್ವರ ಗ್ರಾಮ ಪಂಚಾಯಿತಿಯ ಪಿ.ಡಿ.ಒ (PDO) ಆದ ಗಂಗರಾಜು ಹಾಗೂ ಪಂಚಾಯಿತಿ ಕಾರ್ಯದರ್ಶಿ ಕೃಷ್ಣಮೂರ್ತಿ ಅವರು ವಹಿಸಿದ್ದರು. ಕಾರ್ಯಕ್ರಮಕ್ಕೆ ಪ್ರಮುಖ ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಣ ಫೌಂಡೇಶನ್‌ನ ನಿರ್ದೇಶಕರಾದ ಅಶ್ವತ್ , ಜಿ.ಎಸ್.ಎಸ್.ಡಬ್ಲ್ಯೂ (JSSF) ಸಂಸ್ಥೆಯ ರವಿ ಶಿಕ್ಷಣ ಫೌಂಡೇಶನ್‌ನ ಪ್ರಮುಖರಾದ ಗಂಗಾಧರ್
ಮತ್ತು ವಿನೋದ್ಹಾ ಗೂ ಗ್ರಂಥಪಾಲಕರಾದ (Librarian) ಕವಿತಾ ಅವರು ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಶಿಕ್ಷಕರ ಸಕ್ರಿಯ ಭಾಗಿತ್ವ:
ಈ ಸಭೆಯಲ್ಲಿ ದೇವನಹಳ್ಳಿ ತಾಲೂಕಿನಿಂದ 10 ಅತಿಥಿ ಶಿಕ್ಷಕರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಿಂದ 14 ಅತಿಥಿ ಶಿಕ್ಷಕರು ಸೇರಿದಂತೆ ಒಟ್ಟು 24ಕ್ಕೂ ಹೆಚ್ಚು ಶಿಕ್ಷಕರು ಮತ್ತು ಪದಾಧಿಕಾರಿಗಳು ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಣ ಫೌಂಡೇಶನ್ ಮತ್ತು ಗ್ರಾಮ ಪಂಚಾಯಿತಿ ನೀಡುತ್ತಿರುವ ಈ ಸಹಕಾರ ಅತ್ಯಂತ ಶ್ಲಾಘನೀಯ ಎಂದು ನೆರೆದಿದ್ದ ಗಣ್ಯರು ಮತ್ತು ಶಿಕ್ಷಕರು ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದ್ದಾರೆ

