
ಹೊಸಕೋಟೆ : ಕಟ್ಟಡದ ಸ್ಥಿತಿ ಹೇಗಿದ್ದರೂ ಪರವಾಗಿಲ್ಲ. ಕನಿಷ್ಠ ಅಗತ್ಯ ಸೌಲಭ್ಯಗಳನ್ನಾದರೂ ಒದಗಿಸಲು ಸಾಧ್ಯವಿಲ್ಲವೇ? ವಿದ್ಯಾರ್ಥಿಗಳು ಇಂತಹ ಪರಿಸ್ಥಿತಿಯಲ್ಲಿ ಹೇಗೆ ವ್ಯಾಸಂಗ ಮಾಡಬೇಕು? ಉನ್ನತ ಮಟ್ಟದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಹಾಸ್ಟಲ್ ಅಧಿಕಾರಿಗಳನ್ನು ತಹಸೀಲ್ದಾರ್ ಶೀತಲ್ ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ರಾತ್ರಿ ನಡೆದಿದೆ.
ನಗರದ ಕಮ್ಮವಾರಿಪೇಟೆಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ ಹಾಸ್ಟೆಲ್‌ಗೆ ತಹಸೀಲ್ದಾರ್ ಶೀತಲ್ ಟಿ.ಎಸ್ ಗುರುವಾರ ರಾತ್ರಿ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳ ವಿರುದ್ಧತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕ ಸೌಲಭ್ಯಗಳಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ತಹಸೀಲ್ದಾರ್ ಭೇಟಿ ನೀಡಿದ್ದರು. ಈ ವೇಳೆ ಹಾಸ್ಟೆಲ್‌ನ ದುಸ್ಥಿತಿ ಕಂಡು ಬೇಸರ ವ್ಯಕ್ತಪಡಿಸಿದ ಅವರು, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿನೋದ ಅವರಿಗೆ ಒಂದು ವಾರದೊಳಗೆ ಹಾಸ್ಟೆಲ್‌ನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸುವ0ತೆ ಸೂಚಿಸಿದರು.

ಹಾಸ್ಟೆಲ್‌ನಲ್ಲಿ ಒಟ್ಟು ೩೫ ವಿದ್ಯಾರ್ಥಿಗಳಿದ್ದು, ಕೇವಲ ೨೦ ಹಾಸಿಗೆಗಳಿವೆ. ಹೀಗಾಗಿ ಉಳಿದ ವಿದ್ಯಾರ್ಥಿಗಳು ನೆಲದಲ್ಲಿಯೇ ಮಲಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲ ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯವಿದ್ದು, ಪ್ರತ್ಯೇಕ ಸ್ನಾನ ಗೃಹವೂ ಇಲ್ಲ. ಬಟ್ಟೆ ತೊಳೆಯುವ ಸ್ಥಳದಲ್ಲಿಯೇ ವಿದ್ಯಾರ್ಥಿಗಳು ಸ್ನಾನ ಮಾಡಬೇಕಾದ ಪರಿಸ್ಥಿತಿ ಇದೆ. ಸ್ನಾನಕ್ಕೆ ಕೇವಲ ಮೂರು ಬಕೆಟ್‌ಗಳು ಹಾಗೂ ಎರಡು ಚೊಂಬುಗಳಿರುವುದನ್ನು ಕಂಡು ತಹಸೀಲ್ದಾರ್ ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಮಲಗುವ ಕೊಠಡಿಯಲ್ಲಿದ್ದ ಮುರಿದ ಸ್ಥಿತಿಯಲ್ಲಿರುವ ಫ್ಯಾನ್‌ನ್ನು ಕಂಡು ತಹಸೀಲ್ದಾರ್ ಗರಂ ಆದರು. ಕಟ್ಟಡದ ಸ್ಥಿತಿ ಹೇಗಿದ್ದರೂ ಪರವಾಗಿಲ್ಲ. ಕನಿಷ್ಠ ಅಗತ್ಯ ಸೌಲಭ್ಯಗಳನ್ನಾದರೂ ಒದಗಿಸಲು ಸಾಧ್ಯವಿಲ್ಲವೇ? ವಿದ್ಯಾರ್ಥಿಗಳು ಇಂತಹ ಪರಿಸ್ಥಿತಿಯಲ್ಲಿ ಹೇಗೆ ವ್ಯಾಸಂಗ ಮಾಡಬೇಕು? ಉನ್ನತ ಮಟ್ಟದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಹಾಸ್ಟೆಲ್‌ಗೆ ಒಮ್ಮೆಯಾದರೂ ಭೇಟಿ ನೀಡಿದ್ದಾರೆಯೇ? ಎಂದು ವಾರ್ಡನ್ ಮಂಜುಳಾ ಅವರನ್ನು ಪ್ರಶ್ನಿಸಿದರು.
ಬಳಿಕ ಸ್ಥಳದಿಂದಲೇ ಸಹಾಯಕ ನಿರ್ದೇಶಕಿ ವಿನೋದ ಅವರಿಗೆ ದೂರವಾಣಿ ಕರೆ ಮಾಡಿ ಹಾಸ್ಟೆಲ್‌ನ ಅವ್ಯವಸ್ಥೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಬೇರೆ ಕಟ್ಟಡವನ್ನು ನೋಡಿರುವುದಾಗಿ ಹಾಗೂ ಒಂದು ವಾರದೊಳಗೆ ಹಾಸ್ಟೆಲ್‌ನ್ನು ಸ್ಥಳಾಂತರಿಸುವುದಾಗಿ ವಿನೋದ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಶೀತಲ್, ಒಂದು ವಾರದೊಳಗೆ ಕಟ್ಟಡ ಸ್ಥಳಾಂತರಿಸಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.


