
ಹೊಸಕೋಟೆ : ರಾಜ್ಯದ ಗ್ರಾಮೀಣ ಭಾಗದಲ್ಲಿ ಸಾವಿರಾರು ಕುಟುಂಬಗಳಿಗೆ ಆಸರೆಯಾಗಿರುವ ಬಮೂಲ್ ಅಭಿವೃದ್ದಿ ಮತ್ತು ಪ್ರಗತಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯವಾಗಿದೆ. ಹಾಲು ಉತ್ಪಾದನೆ ಮತ್ತು ಪೂರೈಕೆಯಲ್ಲಿ ಹೊಸಕೋಟೆ ಪ್ರಥಮ ಸ್ಥಾನದಲ್ಲಿ ಇರುವಂತೆ ರೈತರು ಮತ್ತು ಸಿಬ್ಬಂದಿಗಳು ಸಹಕಾರ ಪ್ರೋತ್ಸಾಹ ನೀಡಬೇಕು ಎಂದು ಬಮೂಲ್ ನಿರ್ದೇಶಕ ಬಿ.ವಿ ಸತೀಶ್‌ಗೌಡರು ಹೇಳಿದರು
ತಾಲೂಕಿನ ಚಿಕ್ಕಹುಲ್ಲೂರು ಬಳಿ ಇರುವ ಬಮುಲ್ ಶಿಬಿರ ಕಚೇರಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಗುತ್ತಿಗೆ ಸಿಬ್ಬಂದಿಗೆ ಉಡುಗೊರೆಗಳನ್ನು ವಿತರಿಸಿ ಅವರು ಮಾತನಾಡಿದರು.
ಹಾಲು ಉತ್ಪಾದನೆ ಮತ್ತು ಪೂರೈಕೆಯಲ್ಲಿ ಹೊಸಕೋಟೆ ತನ್ನಾದೆಯಾದ ಸ್ಥಾನವನ್ನು ಉಳಿಸಿಕೊಂಡು ಬರುತ್ತಿದೆ. ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವರು ಅಧಿಕಾರ ವಹಿಸಿಕೊಂಡ ನಂತರ ಸಂಸ್ಥೆಯಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ತರಲಾಗಿದ್ದು, ಆಡಳಿತಾತ್ಮಕವಾಗಿ ಹಾಗೂ ಹಾಲು ಉತ್ಪಾದಕರಿಗೆ ಅನುಕೂಲವಾಗುವ ರೀತಿಯಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುತ್ತಿದೆ. ಹಾಲು ಉತ್ಪಾದಕರಿಗೆ ಉತ್ತಮ ಸೇವೆ ಒದಗಿಸುವುದರ ಜೊತೆಗೆ ಸಿಬ್ಬಂದಿಯ ಕಲ್ಯಾಣಕ್ಕೂ ಗಮನ ನೀಡಲಾಗುತ್ತಿದೆ. ಬಮುಲ್‌ನ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಗುತ್ತಿಗೆ ಸಿಬ್ಬಂದಿಯ ಪಾತ್ರವೂ ಮಹತ್ವದ್ದಾಗಿದೆ. ಹಾಲು ಸಂಗ್ರಹಣೆ, ಸಾಗಣೆ, ಶಿಬಿರ ಕಚೇರಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಸಿಬ್ಬಂದಿಯ ಶ್ರಮವನ್ನು ಸಂಸ್ಥೆ ಗುರುತಿಸುತ್ತಿದ್ದು, ಅವರ ಸಮಸ್ಯೆಗಳನ್ನು ಆಲಿಸಿ ಸಾಧ್ಯವಾದಷ್ಟು ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಗ್ರಾಮೀಣ ಭಾಗದಲ್ಲಿ ರೈತರು ಹೆಚ್ಚು ಹಾಲು ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಬೇಕು.ಗುಣಮಟ್ಟದ ಹಾಲು ಪೂರೈಕೆಯಿಂದ ಉತ್ತಮ ಲಾಭವನ್ನು ಹೊಂದಲು ಸಾಧ್ಯವಾಗಲಿದೆ. ಹಾಲು ಉತ್ಪಾದಕರಿಗೆ ಗುಣಮಟ್ಟದ ಪಶು ಆಹಾರ, ಅಗತ್ಯ ಸೇವೆಗಳು ಹಾಗೂ ಮಾರ್ಗದರ್ಶನ ಒದಗಿಸುವ ಮೂಲಕ ಹಾಲಿನ ಉತ್ಪಾದನೆ ಹೆಚ್ಚಿಸಲು ಒಕ್ಕೂಟದಿಂದ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ಇದನ್ನು ರೈತರು ಸದ್ಬಳಿಕೆ ಮಾಡಿಕೊಂಡು ಅರ್ಥಿಕ ಪ್ರಗತಿ ಕಾಣಬೇಕು ಎಂದರು
ಕಾರ್ಯಕ್ರಮದಲ್ಲಿ ಬಮೂಲ್ ಹೊಸಕೋಟೆ ಶಿಬಿರ ವ್ಯವಸ್ಥಾಪಕ ಮಧುಸೂದನ್,ಶಿಬಿರ ಕಚೇರಿಯ ಮುಖ್ಯಸ್ಥ ವಿನಯ್ ಕುಮಾರ್, ವಿಸ್ತರಣಾಧಿಕಾರಿ ರಮೇಶ್, ಆನಂದ್, ರಘುನಾಥ್, ಪವಿತ್ರ, ವಿದ್ಯಾಶ್ರೀ, ಕೃಷಿ ಅಧಿಕಾರಿ ಸೌಮ್ಯ, ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘದ ಅಧ್ಯಕ್ಷ ವಿಜಯಕುಮಾರ್ ಸೇರಿದಂತೆ ಹಲವು ಮುಖಂಡರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

