ವಿಜಯನ್ಯೂಸ್ ಬೆಂಗಳೂರು ಮೇ.21
ಫರ್ನಿಚರ್, ಡ್ರೆಸ್ ಮೆಟೀರಿಯಲ್ ಹಾಗೂ ಐರನ್ ಟೇಬಲ್ ಒಳಗೆ ಅಡಗಿಸಿ ಡ್ರಗ್ಸ್ ಸಾಗಾಟ; 8 ಆರೋಪಿಗಳ ಬಂಧನ
ಬೆಂಗಳೂರು: ಹೆಬ್ಬಾಳ ಪೊಲೀಸರು ಭಾರೀ ಡ್ರಗ್ಸ್ ಜಾಲವನ್ನು ಭೇದಿಸಿದ್ದು, ಸುಮಾರು 34 ಕೋಟಿ ರೂಪಾಯಿ ಮೌಲ್ಯದ 17 ಕೆಜಿ 400 ಗ್ರಾಂ ಎಂಡಿಎಂಎ (MDMA) ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಮೂವರು ವಿದೇಶಿಗರು ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಡನ್ಫಾ ಗೆರಾಲ್ಡ್ (ಸೆನೆಗಲ್), ಮೆಗ್ರಾತ್ (ತಾಂಜೇನಿಯಾ), ಒಬಿಯಾನಿಜ್ ರೀಟಾ (ನೈಜೀರಿಯಾ) ಸೇರಿದಂತೆ ಐವರು ಭಾರತೀಯರು ಸೇರಿದ್ದಾರೆ. ಆರೋಪಿಗಳು ದೆಹಲಿಯಿಂದ ಬೆಂಗಳೂರಿಗೆ ರೈಲಿನ ಮೂಲಕ ಡ್ರಗ್ಸ್ ಸಾಗಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಡ್ರೆಸ್ ಮೆಟೀರಿಯಲ್ಸ್, ಫರ್ನಿಚರ್, ಐರನ್ ಮಾಡಲು ಬಳಸುವ ಟೇಬಲ್ ಹಾಗೂ ಸ್ಟ್ಯಾಂಡ್‌ಗಳ ಒಳಭಾಗದಲ್ಲಿ ಡ್ರಗ್ಸ್ ಅಡಗಿಸಿ ಗಿಫ್ಟ್ ಪ್ಯಾಕಿಂಗ್ ಮಾದರಿಯಲ್ಲಿ ಸಾಗಾಟ ಮಾಡಲಾಗುತ್ತಿತ್ತು. ಮೂರು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಜಾಲವನ್ನು ಹೆಬ್ಬಾಳ ಪೊಲೀಸರು ಸೂಕ್ಷ್ಮ ತನಿಖೆಯ ಮೂಲಕ ಪತ್ತೆಹಚ್ಚಿದ್ದಾರೆ.
ಹೋಂಡೈ ವೆನ್ಯೂ ಕಾರಿನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ವೇಳೆ ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ 4 ಕೆಜಿ 300 ಗ್ರಾಂ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ಬಳಿಕ ವಿಚಾರಣೆ ನಡೆಸಿದಾಗ ಸರ್ಜಾಪುರದಲ್ಲಿರುವ ಮನ್ಸೂರ್ ನಿವಾಸದಲ್ಲಿ ಇನ್ನಷ್ಟು ಡ್ರಗ್ಸ್ ಸಂಗ್ರಹಿಸಿರುವ ಮಾಹಿತಿ ಲಭ್ಯವಾಗಿದ್ದು, ದಾಳಿ ನಡೆಸಿದ ಪೊಲೀಸರು 10 ಕೆಜಿ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ.
ಮುಂದುವರೆದ ಕಾರ್ಯಾಚರಣೆಯಲ್ಲಿ ಹೆಣ್ಣೂರಿನ ಅಬ್ದುಲ್ ಸಮಾದ್ ನಿವಾಸದಲ್ಲಿ 3.5 ಕೆಜಿ ಎಂಡಿಎಂಎ ಪತ್ತೆಯಾಗಿದೆ. ಈ ಮೂಲಕ ಒಟ್ಟು 17 ಕೆಜಿ 400 ಗ್ರಾಂ ಡ್ರಗ್ಸ್ ಜಪ್ತಿ ಮಾಡಲಾಗಿದೆ.
ಪೊಲೀಸರ ಪ್ರಕಾರ, ಉತ್ತರ ಭಾರತ ಹಾಗೂ ವಿದೇಶಗಳಿಂದ ಡ್ರಗ್ಸ್ ಮೊದಲು ದೆಹಲಿಗೆ ತಲುಪಿಸಿ, ಅಲ್ಲಿಂದ ದೇಶದ ವಿವಿಧ ಭಾಗಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ದೆಹಲಿಯ ಡೀಲರ್‌ಗಳು, ಬೆಂಗಳೂರಿನ ಟ್ರಾನ್ಸ್‌ಪೋರ್ಟರ್‌ಗಳು ಮತ್ತು ಸ್ಥಳೀಯ ಪೆಡ್ಲರ್‌ಗಳ ಮೂಲಕ ಈ ಜಾಲ ಕಾರ್ಯನಿರ್ವಹಿಸುತ್ತಿತ್ತು ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಹೆಬ್ಬಾಳ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

