ಬೆಂಗಳೂರು: ಬಿರಿಯಾನಿ ತಿನ್ನಲು ಹೋಗಿದ್ದ ವಿದ್ಯಾರ್ಥಿಯೊಬ್ಬನ ಮೇಲೆ ದುಷ್ಕರ್ಮಿಗಳು ಚಾ*ಕುವಿನಿಂದ ಹ*ಲ್ಲೆ ನಡೆಸಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಂಜಾರ ಲೇಔಟ್‌ನಲ್ಲಿ ನಡೆದಿದೆ.
ಧೀರಜ್ (21) ಗಾಯಗೊಂಡ ಯುವಕನಾಗಿದ್ದು, ಆತ ಬಿಬಿಎ ವ್ಯಾಸಂಗ ಮಾಡುತ್ತಾ ಫ್ಲಿಪ್‌ಕಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ನಿನ್ನೆ ಬೆಳಗಿನ ಜಾವ ಸುಮಾರು 3 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಬೈಕ್ ಅಡ್ಡ ಬಂದ ವಿಚಾರಕ್ಕೆ ಆರಂಭವಾದ ಜಗಳ ಬಳಿಕ ವಿಕೋಪಕ್ಕೆ ತಿರುಗಿದೆ.
ಬೈಕ್‌ನಲ್ಲಿ ಬಂದಿದ್ದ ಭುವನ್, ಮಿಥುನ್ ಹಾಗೂ ಅಪ್ರಾಪ್ತ ಬಾಲಕ ಸೇರಿ ಧೀರಜ್ ಮೇಲೆ ಏಕಾಏಕಿ ಹ*ಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಆರೋಪಿಗಳು ಧೀರಜ್ ಬೆನ್ನು ಹಾಗೂ ತೊಡೆ ಭಾಗಕ್ಕೆ ಚಾ*ಕುವಿನಿಂದ ಐದಾರು ಬಾರಿ ಇರಿದಿದ್ದಾರೆ. ಬಳಿಕ ಆರೋಪಿಗಳು ಧೀರಜ್‌ನ ಬೈಕ್ ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.
ರಕ್ತದ ಮಡುವಿನಲ್ಲಿ ರಸ್ತೆಯಲ್ಲಿ ನಿಂತಿದ್ದ ಧೀರಜ್‌ರನ್ನು ಸ್ಥಳದಲ್ಲಿದ್ದ ಬೈಕ್ ಸವಾರನೊಬ್ಬ ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಸದ್ಯ ಧೀರಜ್ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇನ್ನೂ ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿದ್ಯಾರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಚಾಕುವಿನಿಂದ ಹಲ್ಲೆ ನಡೆಸಿರುವುದು ಕಂಡುಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ರಾಮಮೂರ್ತಿ ನಗರ ಪೊಲೀಸರು ಆರೋಪಿಗಳಾದ ಭುವನ್, ಮಿಥುನ್ ಸೇರಿದಂತೆ ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದಾರೆ.
ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

