Home ರಾಜ್ಯಟಿನ್ ಫ್ಯಾಕ್ಟರಿ–ಹೆಚ್.ಕ್ರಾಸ್ ಮಾರ್ಗಕ್ಕೆ ಬಿಎಂಟಿಸಿ ವೇಗದೂತ ಬಸ್ ಸೇವೆಗೆ ಚಾಲನೆ !

ಟಿನ್ ಫ್ಯಾಕ್ಟರಿ–ಹೆಚ್.ಕ್ರಾಸ್ ಮಾರ್ಗಕ್ಕೆ ಬಿಎಂಟಿಸಿ ವೇಗದೂತ ಬಸ್ ಸೇವೆಗೆ ಚಾಲನೆ !

ಹೊಸಕೋಟೆ ತಾಲೂಕು ಲಕ್ಷ್ಮಿಪುರ ಬಳಿ ಚಾಲನೆ ಕಾರ್ಯಕ್ರಮ

by Editor

ವಿಜಯ ನ್ಯೂಸ್ ಹೊಸಕೋಟೆ  ಮೇ.22

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸಾರ್ವಜನಿಕರಿಗೆ ಮತ್ತಷ್ಟು ಗುಣಮಟ್ಟದ ಸಾರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಹೊಸಕೋಟೆ ಭಾಗದಲ್ಲಿ ಹೊಸ ವೇಗದೂತ ಬಸ್ ಸೇವೆಗಳನ್ನು ಆರಂಭಿಸಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಅವರು ಹೊಸಕೋಟೆ ತಾಲ್ಲೂಕಿನ ನಂದಗುಡಿ ಹೋಬಳಿಯ ಲಕ್ಷ್ಮೀಪುರ ಗೇಟ್ ಬಳಿ ಹೊಸಕೋಟೆ–ಹೆಚ್.ಕ್ರಾಸ್ ಮಾರ್ಗಕ್ಕೆ 10 ಬಿಎಂಟಿಸಿ ವೇಗದೂತ ಬಸ್ ಸೇವೆಗಳಿಗೆ ಚಾಲನೆ ನೀಡಿ ಮಾತನಾಡಿದರು.

ಪ್ರಸ್ತುತ ಬಿಎಂಟಿಸಿ 50 ಘಟಕಗಳಿಂದ ಪ್ರತಿದಿನ 6,275 ಅನುಸೂಚಿಗಳ ಮೂಲಕ 65,945 ಸುತ್ತುವಳಿಗಳನ್ನು ನಡೆಸುತ್ತಿದ್ದು, ಸುಮಾರು 45 ಲಕ್ಷ ಪ್ರಯಾಣಿಕರು ಸಂಸ್ಥೆಯ ಸೇವೆಯನ್ನು ಪಡೆಯುತ್ತಿದ್ದಾರೆ. ಇದರಲ್ಲಿ 1,742 ಎಲೆಕ್ಟ್ರಿಕ್ ಬಸ್‌ಗಳು ಕಾರ್ಯಾಚರಣೆಯಲ್ಲಿವೆ.

ಬೆಂಗಳೂರು ಸುತ್ತಮುತ್ತಲಿನ ಅತ್ತಿಬೆಲೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಹಾಗೂ ಹೊಸಕೋಟೆ ಭಾಗಗಳಿಗೆ ಈಗಾಗಲೇ 124 ವೇಗದೂತ ಸೇವೆಗಳು ಸಂಚರಿಸುತ್ತಿವೆ. ಈ ಹಿನ್ನಲೆಯಲ್ಲಿ ಹೆಚ್.ಕ್ರಾಸ್ ಭಾಗದ ಸಾರ್ವಜನಿಕರ ಅನುಕೂಲಕ್ಕಾಗಿ ಹೊಸ ಮಾರ್ಗಗಳನ್ನು ಪರಿಚಯಿಸಲಾಗಿದೆ.

ಹೊಸ ಸೇವೆಯಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರಿಗೆ ವೇಗವಾದ ಮತ್ತು ನೇರ ಸಾರಿಗೆ ಸೌಲಭ್ಯ ದೊರೆಯಲಿದ್ದು, ಬೆಂಗಳೂರಿನ ಟ್ರಾಫಿಕ್ ದಟ್ಟಣೆಯನ್ನು ತಪ್ಪಿಸಿ ಸುಲಭ ಸಂಚಾರಕ್ಕೆ ನೆರವಾಗಲಿದೆ ಎಂದರು.

ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, EX-317H ಮಾರ್ಗದಲ್ಲಿ ಟಿನ್ ಫ್ಯಾಕ್ಟರಿಯಿಂದ ಹೆಚ್.ಕ್ರಾಸ್‌ವರೆಗೆ 7 ಬಸ್‌ಗಳು 60 ಸುತ್ತುವಳಿಗಳೊಂದಿಗೆ ಪ್ರತಿ 30 ನಿಮಿಷಕ್ಕೊಮ್ಮೆ ಸಂಚರಿಸಲಿವೆ. ಈ ಮಾರ್ಗದ ಪ್ರಯಾಣ ದರ ₹60 ಆಗಿರುತ್ತದೆ ಎಂದು ತಿಳಿಸಿದರು.

ಇನ್ನು STRR-1 ಮಾರ್ಗದಲ್ಲಿ ಹೊಸಕೋಟೆಯಿಂದ ನೆಲಮಂಗಲದವರೆಗೆ 11 ಬಸ್‌ಗಳು 25 ಸುತ್ತುವಳಿಗಳೊಂದಿಗೆ ಕಾರ್ಯಾಚರಣೆ ನಡೆಸಲಿವೆ. ಈ ಮಾರ್ಗದ ಪ್ರಯಾಣ ದರ ₹110 ಆಗಿದೆ.

ಈ ಮಾರ್ಗಗಳಲ್ಲಿ ಕೆ.ಆರ್.ಪುರಂ, ಐಟಿಐ ಗೇಟ್, ಹೊಸಕೋಟೆ ಹೈಸ್ಕೂಲ್, ನಂದಗುಡಿ, ದೇವನಹಳ್ಳಿ, ದೊಡ್ಡಬಳ್ಳಾಪುರ, ಮಧುರೆ ದೇವಾಲಯ ಸೇರಿದಂತೆ ಹಲವು ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸಲಾಗಿದೆ.

ಹೊಸಕೋಟೆ ತಾಲ್ಲೂಕಿನ ನಂದಗುಡಿ ಹೋಬಳಿಯ ಇಟ್ಟಸಂದ್ರ ಗ್ರಾಮದಲ್ಲಿ 5 ಎಕರೆ ಪ್ರದೇಶದಲ್ಲಿ ಹಾಗೂ ಅನುಗೊಂಡನಹಳ್ಳಿ ಬಳಿ 2 ಎಕರೆ ಪ್ರದೇಶದಲ್ಲಿ ಎಲೆಕ್ಟ್ರಿಕ್ ಬಸ್ ಡಿಪೋ ಸ್ಥಾಪನೆಗೆ ಅನುಮೋದನೆ ದೊರೆತಿದ್ದು, ಮುಂದಿನ ದಿನಗಳಲ್ಲಿ ಹೊಸಕೋಟೆಯಿಂದ ಮುಗಬಾಳ, ಚಿಕ್ಕನಹಳ್ಳಿ, ತಾವರೆಕೆರೆ ಮಾರ್ಗವಾಗಿ ನರಸಾಪುರ ಕೈಗಾರಿಕಾ ಪ್ರದೇಶದವರೆಗೆ ಹಾಗೂ ಹೊಸಕೋಟೆಯಿಂದ ಮಾಲೂರುವರೆಗೆ ಬಿಎಂಟಿಸಿ ಬಸ್ ಸೇವೆ ವಿಸ್ತರಿಸುವಂತೆ ಸಚಿವರಲ್ಲಿ ಮನವಿ ಮಾಡಲಾಯಿತು.

ಶಿಡ್ಲಘಟ್ಟ ಶಾಸಕ ಬಿ.ಎನ್. ರವಿಕುಮಾರ್ ಮಾತನಾಡಿ, ಬಿಎಂಟಿಸಿ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್.ಕ್ರಾಸ್‌ನಿಂದ ಜಂಗಮಕೋಟೆ ಕ್ರಾಸ್, ವಿಜಯಪುರ, ದೇವನಹಳ್ಳಿ ಮಾರ್ಗವಾಗಿ ಯಲಹಂಕ ಹಾಗೂ ಶಿಡ್ಲಘಟ್ಟ, ಮಳ್ಳೂರು, ಮೇಲೂರು, ವಿಜಯಪುರ ಭಾಗಗಳಿಗೆ ಸಹ ಬಸ್ ಸೇವೆ ವಿಸ್ತರಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಎಂಟಿಸಿ ಅಧ್ಯಕ್ಷ ವಿ.ಎಸ್. ಆರಾಧ್ಯ, ಉಪಾಧ್ಯಕ್ಷ ಎಂ. ನಿಕೇತ್‌ರಾಜ್, ವ್ಯವಸ್ಥಾಪಕ ನಿರ್ದೇಶಕ ಕೆ.ಬಿ. ಶಿವಕುಮಾರ್, ಮುಖ್ಯ ಸಂಚಾರ ವ್ಯವಸ್ಥಾಪಕ ಜೆ.ಟಿ. ಪ್ರಭಾಕರ್ ರೆಡ್ಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Spread the love

You may also like

Leave a Comment

ಸೂಲಿಬೆಲೆಯಲ್ಲಿ ರೌಡಿಶೀಟರ್ ಹ*ತ್ಯೆ   ಹಸಿರೇ ನಮ್ಮ ಉಸಿರಾಗಿರಲಿ   ಹಿರಿಯ ಶಾಸಕ ಹೆಚ್‌ಸಿ.ಮಹದೇವಪ್ಪನವರಿಗೆ ಸಚಿವ ಸ್ಥಾನ ನೀಡದೆ ಕಡೆಗಣನೆ ಮಾಡಿರುವುದು ಸರಿಯಲ್ಲ   ಗ್ರಾಮೀಣ ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹ ಅವಶ್ಯ   ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಹಿನ್ನಲೆ, ದೊಡ್ಡಕೋಲಿಗದಲ್ಲಿ ಸಂಭ್ರಮಾಚರಣೆ