ಹೊಸಕೋಟೆ : ಪ್ರಾಥಮಿಕ ಹಂತದಲ್ಲಿ ಶಿಕ್ಷಣವನ್ನು ಕಲಿಸಿಕೊಟ್ಟ ಶಾಲೆ, ಗುರುಗಳನ್ನು ಯಾವೊಬ್ಬ ವಿದ್ಯಾರ್ಥಿಯೂ ಮರೆಯಲಾರ. ಪ್ರತಿಯೊಬ್ಬ ವ್ಯಕ್ತಿಯ ಜೀವನದ ಶೈಕ್ಷಣಿಕ ಅಡಿಪಾಯ ಪ್ರಾಥಮಿಕ ಶಾಲೆಯಾಗಿದೆ. ಈ ಹಂತದಲ್ಲಿ ಕಲಿತ ಶಿಕ್ಷಣ ಪ್ರತಿಯೊಬ್ಬರ ಜೀವನವನ್ನು ಬದಲಿಸುತ್ತದೆ ಎಂದು ವಾಗಟ ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ ಶ್ರೀನಿವಾಸ್ ಹೇಳಿದರು
ತಾಲೂಕಿನ ಮಾಕನಹಳ್ಳಿ ಸರಕಾರಿ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು
ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಸಮಯಪ್ರಜ್ಞೆ ಬಹಳ ಮುಖ್ಯವಾಗಿದ್ದು, ನಿರಂತರ ಅಧ್ಯಯನದಿಂದ ಮಾತ್ರ ಗುರಿ ತಲುಪಲು ಸಾಧ್ಯ. ಸಾಧನೆಗೆ ಶ್ರದ್ಧೆ, ಸಂಯಮ ಹಾಗೂ ಕಠಿಣ ಪರಿಶ್ರಮ ಅಗತ್ಯ ಇಂದಿನ ಮಕ್ಕಳು ಮೊಬೈಲ್‌ಗಳಿಂದ ದೂರವಿದ್ದು ವಿದ್ಯಾಭ್ಯಾಸದತ್ತ ಗಮನ ಹರಿಸಬೇಕು. ಹೆಚ್ಚಿನ ವಿದ್ಯಾಭ್ಯಾಸದಿಂದಲೇ ಮುಂದಿನ ಜೀವನದಲ್ಲಿ ಸಾಧನೆ ಸಾಧ್ಯ. ಶಿಕ್ಷಣದ ಜ್ಞಾನವೇ ಬೆಳಕಿನ ಶಕ್ತಿಯಾಗಿದ್ದು, ಶ್ರದ್ಧಾಭಕ್ತಿಯಿಂದ ವ್ಯಾಸಂಗ ಮಾಡಿ ಗುರಿ ತಲುಪಿ ತಂದೆ-ತಾಯಿಗಳು ಹಾಗೂ ಗುರುಹಿರಿಯರಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.
ಅತಿಥಿ ಶಿಕ್ಷಕ ಬಾಬು ಪ್ರಕಾಶ್ ಮಾತನಾಡಿ, ಸಮಾಜದ ಬದಲಾವಣೆ ಶಿಕ್ಷಣದಿಂದ ಮಾತ್ರ ಸಾಧ್ಯ. ಪ್ರಾಥಮಿಕ ಹಂತದಲ್ಲಿ ಕಲಿತ ಜ್ಞಾನವೇ ಮುಂದಿನ ವಿದ್ಯಾಭ್ಯಾಸಕ್ಕೆ ಬಲವಾಗುತ್ತದೆ. ಪ್ರಾಥಮಿಕ ಜ್ಞಾನವನ್ನು ಸರಿಯಾದ ಸಮಯದಲ್ಲಿ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಯಶಸ್ಸಿನತ್ತ ಸಾಗಬೇಕು. ಏಳನೇ ತರಗತಿ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಕಠಿಣ ಪರಿಶ್ರಮದಿಂದ ಗುರುಗಳು ಹಾಗೂ ಪೋಷಕರಿಗೆ ಕೀರ್ತಿ ತರುವಂತವರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ ಭಾಗ್ಯಲಕ್ಷ್ಮಿ, ಉಪಾಧ್ಯಕ್ಷ ರವಿ, ಗ್ರಾಮ ಪಂಚಾಯಿತಿ ಸದಸ್ಯ ರಾಮಚಂದ್ರಪ್ಪ, ಮುಖ್ಯಶಿಕ್ಷಕಿ ಲೀಲಾ, ಶಿಕ್ಷಕರಾದ , ಮಹಾಂತೇಶ್, ಹೇಮಲತಾ, ಪೋಷಕರಾದ ಚಿಕ್ಕೇಗೌಡ, ಭಾರತಿ, ನಾಗೇಶ್ ಉಪಸ್ಥಿತರಿದ್ದರು.
-
ಬಾಕ್ಸ್
ಸರಕಾರಿ ಶಾಲೆಯಲ್ಲಿ ಗ್ರಾö್ಯಜುಯೇಷನ್ ಡೇ ಕಾರ್ಯಕ್ರಮವನ್ನು ಪೋಷಕರು,ಗ್ರಾಮಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ಆಯೋಜಿಸಿದ್ದು ವಿಶೇಷವಾಗಿತ್ತು.ಖಾಸಗಿ ಶಾಲೆಯ ಮಾದರಿಯಲ್ಲಿ ಕರ‍್ಯಕ್ರಮವನ್ನು ಭಾಬು ಪ್ರಕಾಶ್ ಆಯೋಜಿಸಿ ಗ್ರಾಮಸ್ಥರ ಮೆಚ್ಚಿಗೆಗೆ ಪಾತ್ರರಾದರು.ಏಳನೇ ತರಗತಿ ವಿದ್ಯಾರ್ಥಿಗಳು ಶಾಲೆಯಲ್ಲಿ ಸಿಗುತ್ತಿರುವ ಅತ್ಯುತ್ತಮ ಶಿಕ್ಷಣದ ಬಗೆ,ಕಂಪ್ಯೂಟರ್ ಹಾಗೂ ಅಧುನಿಕ ಶಿಕ್ಷಣದ ಬಗೆ ಮೆಚ್ಚಿಗೆ ವ್ಯಕ್ತಪಡಿಸಿದರು.




