ಸೂಲಿಬೆಲೆ : ಹೋಬಳಿಯ ಬೇಗೂರು ಗ್ರಾಮದಲ್ಲಿ ಮೂಲ ನಕ್ಷೆಯಲ್ಲಿರುವ ರಾಜ ಕಾಲೊವೆಗಳನ್ನು ಮುಚ್ಚಿ ಭೂ ಕಬಳಿಕೆ ಮಾಡುತ್ತಿರುವ ಕೆಲಸ ನಡೆಯುತ್ತಿದೆ ಎಂದು ಜೈ ಬೀಮ್ ಸೇವಾ ಸಮಿತಿ ರಾಜ್ಯಾಧ್ಯಕ್ಷ ಶ್ರೀಕಾಂತ್ ರಾವಣ್ ಆರೋಪಿಸಿದ್ದಾರೆ.
ಈ ಸಂಬ0ಧ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಸೂಲಿಬೆಲೆ ಹೋಬಳಿಯಲ್ಲಿ ಸರಕಾರಿ ರಾಜ ಕಾಲೊವೆ ಜಮೀನುಗಳನ್ನು ಲಪಟಾಯಿಸುವ ಕೆಲಸ ನಡೆಯುತ್ತಿದೆ.ಕಂದಾಯ ಇಲಾಖೆ ಅಧಿಕಾರಿಗಳು ಭೂಗಳ್ಳರ ಪರವಾಗಿ ಕೆಲಸ ಮಾಡುತ್ತಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ದಲಿತರಿಗೆ ಮಂಜೂರಾಗಿರುವ ಜಮೀನುಗಳನ್ನು ಅಧಿಕಾರಿಗಳೊಂದಿಗೆ ಶಾಮೀಲಾಗಿ ಕಬಳಿಕೆ ಮಾಡಲು ಯತ್ನಿಸಲಾಗುತ್ತಿದೆ. ಗ್ರಾಮದ ಸರ್ವೇ ೧೪೧ ರಲ್ಲಿ ದರಖಾಸ್ತು ಮೂಲಕ ಭೂ ಹೀನ ದಲಿತ ರೈತರಿಗೆ ಮಂಜೂರಾಗಿ ಸ್ವಾಧೀನಾನುಭವದಲ್ಲಿರುವ ರೈತರಿಗೆ ಯಾವುದೇ ನೋಟಿಸ್ ನೀಡದೆ ಕಾನೂನು ಬಾಹಿರವಾಗಿ ಅಳತೆ ಮಾಡಿ ಪೋಡಿ, ದುರಸ್ತಿ, ಸ್ಕೇಚ್ ದಾಖಲೆಗಳನ್ನು ತಯಾರಿಸಿ ಈ ಜಮೀನು ಕಬಳಿಕೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅರೆ ಬೆತ್ತಲೆ ತಮಟೆ ಚಳುವಳಿ ಎಚ್ಚರಿಕೆ : ಬೇಗೂರು ಗ್ರಾಮದಲ್ಲಿ ಅಧಿಕಾರಿಗಳು ಅಕ್ರಮವಾಗಿ ಮಾಡಿರುವ ಪೋಡಿ,ಸ್ಕೇಚ್ ದಾಖಲೆಗಳನ್ನು ತಕ್ಷಣ ರದ್ದು ಮಾಡಬೇಕು. ನರೇಂದ್ರ ಕುಮಾರ್ ಹದ್ದು ಬಸ್ತು ಅರ್ಜಿಯನ್ನು ರದ್ದು ಮಾಡಬೇಕು. ಅಕ್ಕಪಕ್ಕದ ಜಮೀನು ಮಾಲೀಕರಿಗೆ ನೋಟಿಸ್ ನೀಡದೆ ಮಾಡಿರುವ ಎಲ್ಲ ಅಳತೆಗಳನ್ನು ಅಮಾನ್ಯ ಮಾಡಬೇಕು.ಮೂಲ ದಾಖಲೆಗಳ ಪ್ರಕಾರ ದಲಿತರ ರೈತರ ಅನುಭವದ ಜಮೀನು ಪುನಃ ಸ್ಥಾಪಿಸಬೇಕು. ಸರಕಾರಿ ಜಮೀನು ಮತ್ತು ರಾಜ ಕಾಲೊವೆಗಳ ಮೇಲೆ ನಡೆದಿರುವ ಅನಧಿಕೃತ ಒತ್ತುವರಿಗಳನ್ನು ತೆರವುಗೊಳಿಸಬೇಕು. ಇದನ್ನು ನಿರ್ಲಕ್ಷö್ಯ ಮಾಡಿದ್ದಲ್ಲಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಮುಂದೆ ಬೃಹತ್ ತಮಟೆ ಚಳುವಳಿ ಹಾಗೂ ಅರೆ ಬೆತ್ತಲೆ ಹೋರಾಟ ನಡೆಸಲಾಗುವುದು ಎಂದು ರಾಜ್ಯಾಧ್ಯಕ್ಷ ಶ್ರೀಕಾಂತ್ ರಾವಣ್ ತಿಳಿಸಿದ್ದಾರೆ.


