Home ರಾಜ್ಯಪತಿಯನ್ನು ಕೊಂದ ಮಹಿಳೆಗೆ ಮರಣದಂಡನೆ ಶಿಕ್ಷೆ

ಪತಿಯನ್ನು ಕೊಂದ ಮಹಿಳೆಗೆ ಮರಣದಂಡನೆ ಶಿಕ್ಷೆ

ಭದ್ರಾವತಿ ನ್ಯಾಯಾಲಯದ ಮಹತ್ವದ ತೀರ್ಪು

by Editor

ವಿಜಯನ್ಯೂಸ್ |ಭದ್ರಾವತಿ ಮೇ.9

:ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದ ಪತ್ನಿ ಹಾಗು ಆಕೆಯ ಪ್ರಿಯಕರನಿಗೆ ಇಲ್ಲಿನ ನಾಲ್ಕನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶುಕ್ರವಾರ ಮರಣ ದಂಡನೆ ವಿಧಿಸಿದೆ.

ಇಲ್ಲಿನ ಖಾಸಗಿ ನರ್ಸಿಂಗ್ ಹೋಂವೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಫ್ಲೋರಾ ನ್ಯಾನ್ಸಿ ಹಾಗು ಆಕೆಯ ಪ್ರಿಯಕರ ರಾಜಶೇಖರಯ್ಯ ಶಿಕ್ಷೆಗೊಳಗಾದ ಆರೋಪಿಗಳು.

ಫ್ಲೋರಾ ನಾನ್ಸಿಯ ವಿವಾಹ ಆಕೆಯ ಮಾವನ ಮಗ ಟ್ಯಾಕ್ಸಿ ಚಾಲಕ ಪ್ರಕಾಶ್ ಬಾಬು ಬಿ.ಎಸ್. ಎಂಬುವವರ ಜೊತೆ 2014ನೇ ಇಸವಿಯಲ್ಲಿ ನೆರವೇರಿತ್ತು. ದಂಪತಿಗೆ ಮಕ್ಕಳಿರಲಿಲ್ಲ. ಮದುವೆಯಾದ ಕೆಲ ವರ್ಷಗಳ ನಂತರ ಫ್ಲೋರಾ ನಾನ್ಸಿಗೆ ರಾಜಶೇಖರಯ್ಯ ಎಂಬುವವನ ಜೊತೆ ಅನೈತಿಕ ಸಂಬಂಧ ಬೆಳೆದಿದೆ. ಈ ವಿಚಾರ ಪತಿಗೆ ತಿಳಿದು ಆತ ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದ. ತನ್ನ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಮುಗಿಸಬೇಕೆಂದು ಹೊಂಚು ಹಾಕಿದ ಮಹಿಳೆ, 2020ನೇ ಇಸವಿಯ ಜನವರಿ 15ರ ರಾತ್ರಿ ಇಲ್ಲಿನ ಸುರಗಿತೋಪಿನಲ್ಲಿರುವ ತನ್ನ ಮನೆಯಲ್ಲಿ ಪತಿಗೆ ಹಾಗಲಕಾಯಿ ಜ್ಯೂಸ್ ನಲ್ಲಿ ಮತ್ತು ಬರಿಸುವ ಮಾತ್ರೆಯನ್ನು ಬೆರೆಸಿ ಕುಡಿಸಿದ್ದಳು. ಪತಿ ನಿದ್ರೆಗೆ ಜಾರಿದನ್ನು ಖಾತ್ರಿ ಪಡಿಸಿಕೊಂಡು, ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ನಿದ್ರೆಗೆ ಜಾರಿದ್ದ ಪ್ರಕಾಶ್ ಬಾಬುನ ಕತ್ತು ಹಿಸುಕಿ ಉಸಿರುಕಟ್ಟಿಸಿ ರಾಜಶೇಖರಯ್ಯ ಕೊಲೆ ಮಾಡಿದ್ದಾನೆ. ಬಳಿಕ ಇಬ್ಬರೂ ಶವವನ್ನು ಪ್ರಕಾಶ್ ಬಾಬುನ ಕಾರಿನಲ್ಲಿ ತೆಗೆದುಕೊಂಡು ಹೋಗಿ, ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಸಮೀಪದ ಭದ್ರಾ ನಾಲೆಗೆ ಎಸೆದು ಬಂದಿದ್ದಾರೆ.

ಘಟನೆ ನಡೆದ ಮೂರು ದಿನ ಬಳಿಕ ಶವ ದೊರಕಿದ್ದು, ಆರಂಭದಲ್ಲಿ ಪ್ರಕಾಶ್ ಬಾಬು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಭಾವಿಸಲಾಗಿತ್ತು. ಮೃತನ ಸಹೋದರ ಫ್ರಾನ್ಸಿಸ್ ನೀಡಿದ ದೂರಿನ ಮೇಲೆ ತನಿಖೆ ಆರಂಭಿಸಿದ ಪೇಪರ್ ಟೌನ್ ಠಾಣೆ ಪೊಲೀಸರು, ಫ್ಲೋರಾ ನ್ಯಾನ್ಸಿ ಹಾಗು ಆಕೆಯ ಪ್ರಿಯಕರನನ್ನು ವಿಚಾರಣೆ ನಡೆಸಿದ್ದಾಗ ಸತ್ಯ ಹೊರಬಂದಿದೆ. ಇಬ್ಬರ ವಿರುದ್ಧ ಐಪಿಸಿ ಕಲಂ 302 ಹಾಗು 201ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಆರೋಪ ಸಾಬೀತಾಗಿದ್ದರಿಂದ, ನ್ಯಾಯಾಧೀಶೆ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಫ್ಲೋರಾ ನ್ಯಾನ್ಸಿ ಹಾಗು ರಾಜಶೇಖರಯ್ಯ ಇಬ್ಬರಿಗೂ ಗಲ್ಲು ಶಿಕ್ಷೆ ಹಾಗೂ 14 ಲಕ್ಷ ದಂಡ ವಿಧಿಸಿದ್ದಾರೆ. ಮೃತನ ಸಹೋದರ ಫ್ರಾನ್ಸಿಸ್‌ಗೆ 5 ಲಕ್ಷ ಪರಿಹಾರ ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ. ಸರ್ಕಾರಿ ವಕೀಲೆ ರತ್ನಮ್ಮ ಪಿ. ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದರು.

ಶಿಕ್ಷೆಗೆ ಒಳಗಾದವರು.

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ