
ಹೊಸಕೋಟೆ : ಡಿ.ಕೆ ಶಿವಕುಮಾರ್ ಸರಕಾರದಲ್ಲಿ ಸಮಾಜ ಕಲ್ಯಾಣ ಖಾತೆಯನ್ನು ಕೆ.ಎಚ್ ಮುನಿಯಪ್ಪ ಅವರಿಗೆ ನೀಡಿರುವುದು ಸರಕಾರ ಸಮುದಾಯಕ್ಕೆ ನೀಡಿರುವ ದೊಡ್ಡ ಕೊಡುಗೆಯಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಾದರ ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಎಚ್.ಎಂ ಸುಬ್ಬರಾಜು ಹೇಳಿದ್ದಾರೆ.
ನೂತನ ಸಚಿವ ಕೆ.ಎಚ್ ಮುನಿಯಪ್ಪ ದಂಪತಿಯನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಅದ್ದೂರಿಯಾಗಿ ಸನ್ಮಾನಿಸಿರುವ ಬಗೆ ಹೊಸಕೋಟೆಯಲ್ಲಿ ವಿಕದೊಂದಿಗೆ ಮಾತನಾಡಿದ ಅವರು, ದಶಕಗಳ ರಾಜಕೀಯ ಅನುಭವ ಹೊಂದಿರುವ ಕೆ.ಎಚ್. ಮುನಿಯಪ್ಪ ಅವರು ದಲಿತರು, ಶೋಷಿತರು ಹಾಗೂ ಹಿಂದುಳಿದ ವರ್ಗಗಳ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ. ಇದೀಗ ಸಮಾಜ ಕಲ್ಯಾಣ ಇಲಾಖೆಯಂತಹ ಮಹತ್ವದ ಖಾತೆಯ ಜವಾಬ್ದಾರಿ ಅವರಿಗೆ ದೊರೆತಿರುವುದರಿಂದ ಪರಿಶಿಷ್ಟ ಜಾತಿ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಮತ್ತಷ್ಟು ಆದ್ಯತೆ ದೊರೆಯಲಿದೆ ಎಂಬ ನಿರೀಕ್ಷೆ ಮೂಡಿದೆ ಎಂದರು

ವಿಶೇಷವಾಗಿ ಮಾದಿಗ ಸಮುದಾಯವು ಹಲವು ವರ್ಷಗಳಿಂದ ಶಿಕ್ಷಣ, ಉದ್ಯೋಗ, ಆರ್ಥಿಕ ಸಬಲೀಕರಣ ಹಾಗೂ ಸಾಮಾಜಿಕ ನ್ಯಾಯಕ್ಕೆ ಸಂಬAಧಿಸಿದ ವಿವಿಧ ಬೇಡಿಕೆಗಳನ್ನು ಸರಕಾರ ಮುಂದಿಡುತ್ತಾ ಬಂದಿದೆ. ಸಮುದಾಯದ ಸಮಸ್ಯೆಗಳನ್ನು ಅರಿತಿರುವ ಅನುಭವಿ ನಾಯಕ ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಖಾತೆ ನೀಡಿರುವುದು ಈ ಬೇಡಿಕೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಲು ಸಹಕಾರಿಯಾಗಲಿದೆ ಎಂದರು
ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ವಿಜಯಕುಮಾರ್ ಮಾತನಾಡಿ, ಮಾದಿಗ ಸಮುದಾಯದ ಹಿರಿಯ ನಾಯಕನಿಗೆ ಸಮಾಜ ಕಲ್ಯಾಣ ಇಲಾಖೆಯ ಹೊಣೆ ನೀಡಿರುವುದು ಸಮುದಾಯಕ್ಕೆ ರಾಜಕೀಯವಾಗಿ ಹೆಚ್ಚಿನ ಮಹತ್ವ ದೊರೆತಿರುವುದರ ಸಂಕೇತವಾಗಿದೆ. ಮುನಿಯಪ್ಪ ಅವರ ಅನುಭವ ಮತ್ತು ಆಡಳಿತಾತ್ಮಕ ಸಾಮರ್ಥ್ಯವನ್ನು ಬಳಸಿಕೊಂಡು ದಲಿತ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಸರಕಾರ ಮತ್ತಷ್ಟು ಒತ್ತು ನೀಡಲಿದೆ ಎಂಬ ಆಶಾಭಾವನೆ ವ್ಯಕ್ತವಾಗಿದೆ ಎಂದರು

ಹೊಸಕೋಟೆ ಮಾದರ ಮಹಾಸಭಾ ತಾಲೂಕು ಅಧ್ಯಕ್ಷ ಗುಟ್ಟಹಳ್ಳಿ ನಾಗರಾಜ್ ಮಾತನಾಡಿ, ಮಾದಿಗ ಸಮುದಾಯದ ಧ್ವನಿಯಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕೆ.ಎಚ್. ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಿರುವುದು ಸಂತಸದ ಸಂಗತಿ ಎಂದರು.
ಸಮುದಾಯದ ಮುಖಂಡರಾದ ಹರೀಶ್ ಚಕ್ರವರ್ತಿ,ದೊಡ್ಡಹುಲ್ಲೂರು ನಾರಾಯಣಸ್ವಾಮಿ,ಸೊಣ್ಣೇನಹಳ್ಳಿ ಶ್ರೀನಿವಾಸ್,ಸೇರಿದಂತೆ ಹೊಸಕೋಟೆ ತಾಲೂಕಿನ ಮಾದರ ಮಹಾಸಭಾ ಪದಾಧಿಕಾರಿಗಳು ಹಾಜರಿದ್ದರು.
ಕೋಟ್
ಕೆ.ಎಚ್ ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಇಲಾಖೆ ಖಾತೆ ನೀಡಿರುವುದಕ್ಕೆ ಮಾದರ ಮಹಾ ಸಭೆ ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತದೆ. ಮುನಿಯಪ್ಪ ಅವರ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ತಲುಪಿ, ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ ಎಂಬ ವಿಶ್ವಾಸವಿದೆ- ಡಾ.ಎಚ್.ಎಂ ಸುಬ್ಬರಾಜು ,ಜಿಲ್ಲಾಧ್ಯಕ್ಷರು ಮಾದಾರ ಮಹಾಸಭಾ ಬೆಂಗಳೂರು ಗ್ರಾಮಾಂತರ.

