ಬೆಂಗಳೂರು : ಯಲಹಂಕದಲ್ಲಿರುವ ಹೋಟೆಲ್ ಪ್ರಖ್ಯಾತಿಯಲ್ಲಿ ಶಾಲಾ ಬಸ್ ಚಾಲಕರು ಹಾಗೂ ಪಾಲಕರಿಗೆ ರಸ್ತೆ ಸುರಕ್ಷತೆ ಕುರಿತು ವಿಶೇಷ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮವನ್ನು ಸೇಪ್ಟಿ ರೀಸರ್ಚ್ ಪೌಂಡೇಷನ್ ಮತ್ತು ಹ್ಯೂಮಾನಿಟಿಕ್ಸ್ ಸಂಸ್ಥೆಗಳ ಸಹಯೋಗದಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು ಟ್ರಾಫಿಕ್ ತರಬೇತಿ ಸಂಸ್ಥೆಯ ಇನ್ಸ್ಪೆಕ್ಟರ್ ಶ್ರೀಮತಿ ಶಾಂತಾ ಅವರು ಉದ್ಘಾಟಿಸಿದರು. ತಮ್ಮ ಭಾಷಣದಲ್ಲಿ ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಪ್ರತಿಯೊಬ್ಬ ಚಾಲಕರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ಚಾಲನೆ ಮಾಡುವಾಗ ಮೊಬೈಲ್ ಬಳಸಬಾರದು, ಸೀಟ್‌ಬೆಲ್ಟ್ ಕಡ್ಡಾಯವಾಗಿ ಧರಿಸಬೇಕು, ಅತಿವೇಗದಲ್ಲಿ ವಾಹನ ಚಲಾಯಿಸಬಾರದು ಹಾಗೂ ಮಕ್ಕಳ ಸುರಕ್ಷತೆ ಅತ್ಯಂತ ಮುಖ್ಯ ಎಂದು ಅವರು ಹೇಳಿದರು. ರಸ್ತೆಯಲ್ಲಿ ಇತರ ಚಾಲಕರೊಂದಿಗೆ ಜಗಳ ಅಥವಾ ಅಸಭ್ಯ ವರ್ತನೆ ಮಾಡದೆ ಜಾಗ್ರತೆಯಿಂದ ವಾಹನ ಚಲಾಯಿಸುವಂತೆ ಸಲಹೆ ನೀಡಿದರು.
ಹ್ಯೂಮಾನಿಟಿಕ್ಸ್ ಸಂಸ್ಥೆಯ ಜಗದೀಶ್ ಮಹದೇವಯ್ಯ ಮಾತನಾಡಿ, ತಮ್ಮ ಸಂಸ್ಥೆ ಕಾರ್ ಕ್ರ‍್ಯಾಶ್ ಡೆಮ್ಮಿ ತಯಾರಿಕೆಯಲ್ಲಿ ತೊಡಗಿಕೊಂಡಿದ್ದು, ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ರಸ್ತೆ ಸುರಕ್ಷತೆ ಕುರಿತ ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕೆಂದು ಹೇಳಿದರು. ವೇದಿಕೆಯಲ್ಲಿ ಸಾಗರ್ ಗೌಡ, ದಿನೇಶ್ ಹಾಗೂ ಗಿರೀಶ್ ಉಪಸ್ಥಿತರಿದ್ದರು.
ತರಬೇತಿ ಸಂಪನ್ಮೂಲ ವ್ಯಕ್ತಿಗಳಾದ ರೋಹಿತ್ ಮತ್ತು ಅಗಸ್ಟಿಯನ್ ಅವರು ಶಾಲಾ ಬಸ್ ಚಾಲನೆ ವೇಳೆ ಪಾಲಿಸಬೇಕಾದ ಸುರಕ್ಷತಾ ಕ್ರಮಗಳು, ಮಕ್ಕಳ ರಕ್ಷಣೆ ಹಾಗೂ ರಸ್ತೆ ನಿಯಮಗಳ ಕುರಿತು ಪವರ್ ಪಾಯಿಂಟ್ ಪ್ರಸ್ತುತಿಕೆ ಮತ್ತು ವಿಡಿಯೋಗಳ ಮೂಲಕ ವಿವರವಾಗಿ ತಿಳಿಸಿದರು.
ಸೇಪ್ಟಿ ರೀಸರ್ಚ್ ಪೌಂಡೇಷನ್‌ನ ವೆಂಕಟೇಶ್ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಯಶಸ್ವಿಯಾಗಿ ನಡೆಸಿದರು. ಈ ಕಾರ್ಯಕ್ರಮದಲ್ಲಿ ಹಲವು ಶಾಲೆಗಳ ಬಸ್ ಚಾಲಕರು ಹಾಗೂ ಪಾಲಕರು ಭಾಗವಹಿಸಿ ರಸ್ತೆ ಸುರಕ್ಷತೆ ಕುರಿತು ಮಾಹಿತಿ ಪಡೆದರು.




