ಸೂಲಿಬೆಲೆ : ಸಾಯಿ ಬಾಬಾ ತಮ್ಮ ಜೀವನದುದ್ದಕ್ಕೂ ಸತ್ಯ, ಶ್ರದ್ಧೆ, ಸಬೂರಿ, ದಯೆ ಹಾಗೂ ಮಾನವ ಸೇವೆಯ ಸಂದೇಶವನ್ನು ಸಾರಿದ್ದರು. ಎಲ್ಲರಿಗೂ ಒಬ್ಬನೇ ದೇವರು ಎಂಬ ತತ್ವವನ್ನು ಬೋಧಿಸಿದ ಅವರು ಧರ್ಮ, ಜಾತಿ, ಮತಗಳ ಭೇದವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣುತ್ತಿದ್ದರು. ಇದೇ ಕಾರಣದಿಂದ ಭಕ್ತರು ಅವರನ್ನು ತಮ್ಮ ಆಧ್ಯಾತ್ಮಿಕ ಗುರುವಾಗಿ ಸ್ವೀಕರಿಸಿ ಗುರು ಪೌರ್ಣಮಿ ದಿನ ವಿಶೇಷವಾಗಿ ಪೂಜಿಸುತ್ತಾರೆ ಎಂದು ಬಮೂಲ್ ನಿರ್ದೇಶಕ ಬಿ.ವಿ ಸತೀಶ್ ಗೌಡರು ಹೇಳಿದರು.
ಸೂಲಿಬೆಲೆ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಗುರು ಪೌರ್ಣಮಿ ಅಂಗವಾಗಿ ಹಮ್ಮಿಕೊಂಡಿದ್ದ ಹೋಮ, ಹವನ ಹಾಗೂ ವಿಶೇಷ ಪೂಜಾ ಕರ‍್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು
ಗುರು ಪೌರ್ಣಮಿ ಹಿಂದೂ ಧರ್ಮದಲ್ಲಿ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಅತ್ಯಂತ ಪವಿತ್ರ ದಿನವಾಗಿದೆ. ಆಷಾಢ ಮಾಸದ ಪೌರ್ಣಮಿ ದಿನ ಆಚರಿಸುವ ಈ ಹಬ್ಬವನ್ನು ವ್ಯಾಸ ಪೌರ್ಣಮಿ ಎಂದೂ ಕರೆಯಲಾಗುತ್ತದೆ. ಜ್ಞಾನ, ಶಿಕ್ಷಣ ಹಾಗೂ ಆಧ್ಯಾತ್ಮಿಕ ಮಾರ್ಗದರ್ಶನ ನೀಡಿದ ಗುರುಗಳನ್ನು ಸ್ಮರಿಸಿ ಗೌರವಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ.
ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಇರುವ ಸಾಯಿ ಮಂದಿರಗಳಲ್ಲಿ ಗುರು ಪೌರ್ಣಮಿಯನ್ನು ಅತ್ಯಂತ ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಶಿರಡಿ ಸಾಯಿ ಬಾಬಾರನ್ನು ಭಕ್ತರು ಸದ್ಗುರುವಾಗಿ ಆರಾಧಿಸುವ ಕಾರಣ, ಈ ದಿನ ಅವರಿಗೆ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ, ಸಾಯಿ ಸಚ್ಚರಿತ್ರೆ ಪಾರಾಯಣ, ಭಜನೆ ಹಾಗೂ ಅನ್ನದಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ಬಿ.ವಿ ಸತೀಶ್ ಗೌಡರು ದೇವರಿಗೆ ವಿಶೇಷ ಹೂವಿನ ಅಲಂಕಾರ,೧೫೦೦ಕ್ಕೂ ಹೆಚ್ಚು ಮಂದಿಗೆ ಅನ್ನ ಸಂತರ್ಪಣೆ ಮಾಡಿಸಿದ್ದರು.


