
ಹೊಸಕೋಟೆ ಜೂನ್.21
ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಸ್ವಾಸ್ತಿಕ್ ಯೋಗ (Swastik Yoga) ವತಿಯಿಂದ ಅರಣ್ಯ ಇಲಾಖೆ ಸಹಯೋಗದಲ್ಲಿ “ಯೋಗ ಸಂಭ್ರಮ – Yoga Sambhrama – Celebration of health , happiness and togetherness.” ಕಾರ್ಯಕ್ರಮವನ್ನು ಪ್ರಕೃತಿಯ ಸುಂದರ ವಾತಾವರಣದ ನಡುವೆ ಅದ್ಧೂರಿಯಾಗಿ ಆಯೋಜಿಸಲಾಗಿತ್ತು.
ಸುಮಾರು 100ಕ್ಕೂ ಹೆಚ್ಚು ಯೋಗಾಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗದ ಶಕ್ತಿಯನ್ನು ಪ್ರಕೃತಿಯೊಂದಿಗೆ ಅನುಭವಿಸಿದರು. ಮರಗಳ ನೆರಳು, ಹಸಿರಿನ ವಾತಾವರಣ ಹಾಗೂ ಶುದ್ಧ ಗಾಳಿಯ ಮಧ್ಯೆ ನಡೆದ ಈ ಯೋಗಾಭ್ಯಾಸವು ಭಾಗವಹಿಸಿದ ಎಲ್ಲರಿಗೂ ಒಂದು ವಿಶಿಷ್ಟ ಅನುಭವವನ್ನು ನೀಡಿತು.

ಕಾರ್ಯಕ್ರಮದ ನೇತೃತ್ವವನ್ನು ಯೋಗಾಚಾರ್ಯ ಹಿತೇಶ್ ವಹಿಸಿದ್ದರು. ಈ ಸಂದರ್ಭದಲ್ಲಿ ಅವರು, “ಯೋಗವೆಂದರೆ ಕೇವಲ ಅರ್ಧ ಗಂಟೆಯ ವ್ಯಾಯಾಮವಲ್ಲ; ಅದು ಜೀವನ ನಡೆಸುವ ಒಂದು ಸಮಗ್ರ ವಿಧಾನ. ಉತ್ತಮ ಆರೋಗ್ಯ, ಉತ್ತಮ ಮನಸ್ಥಿತಿ ಮತ್ತು ಸಂತೋಷಕರ ಜೀವನಕ್ಕಾಗಿ ಯೋಗವನ್ನು ಪ್ರತಿದಿನದ ಜೀವನದ ಭಾಗವಾಗಿಸಿಕೊಳ್ಳಬೇಕು” ಎಂದು ತಿಳಿಸಿದರು.
ಈ ವರ್ಷದ ಸಂದೇಶವಾದ ‘ಒಳ್ಳೆಯ ಆರೋಗ್ಯಕ್ಕಾಗಿ ಯೋಗವನ್ನು ಜೀವನಶೈಲಿಯನ್ನಾಗಿ ಮಾಡೋಣ’ ಎಂಬ ಪರಿಕಲ್ಪನೆಯನ್ನು ಎಲ್ಲರಿಗೂ ತಲುಪಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ರೂಪಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಯೋಗಾಭ್ಯಾಸದ ಜೊತೆಗೆ ಯೋಗ ಆಟಗಳು, ಭಜನೆ, ಮಕ್ಕಳ ವಿಶೇಷ ಪ್ರದರ್ಶನ, ಹಾಗೂ ವಿವಿಧ ಮನರಂಜನಾತ್ಮಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಭಾಗವಹಿಸಿದವರು ಯೋಗವನ್ನು ಹೊಸ ರೀತಿಯಲ್ಲಿ ಅನುಭವಿಸಿ ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳಾದ ಪುಷ್ಪಾ ಮ್ಯಾಡಂ ಯೋಗದ ಮಹತ್ವದ ಬಗ್ಗೆ ಮಾತನಾಡಿ, ತಾವು ಯೋಗಾಭ್ಯಾಸದಿಂದ ಪಡೆದ ಅನುಭವಗಳನ್ನು ಹಂಚಿಕೊಂಡು ಎಲ್ಲರಿಗೂ ಪ್ರೇರಣೆ ನೀಡಿದರು.
ಈ ಕಾರ್ಯಕ್ರಮದ ವಿಶೇಷತೆ ಎಂದರೆ, ಇದು ಕೇವಲ ಯೋಗಾಭ್ಯಾಸಕ್ಕೆ ಸೀಮಿತವಾಗಿರದೆ, ಸಮಾಜಮುಖಿ ಚಿಂತನೆಯೊಂದಿಗೆ ಆಯೋಜಿಸಲಾಗಿತ್ತು. ಭಾಗವಹಿಸುವವರಿಂದ ಬಂದ ಕೊಡುಗೆಗಳನ್ನು ಸಮಾಜದ ಕಲ್ಯಾಣಕ್ಕಾಗಿ ಬಳಸುವ ಉದ್ದೇಶವನ್ನು ಕೂಡ ಹೊಂದಿತ್ತು.
ಪ್ರಕೃತಿಯೊಂದಿಗೆ ಯೋಗವನ್ನು ಸಂಯೋಜಿಸಿ ಆರೋಗ್ಯಕರ ಸಮಾಜ ನಿರ್ಮಾಣದತ್ತ ಹೆಜ್ಜೆ ಇಡುವ ಉದ್ದೇಶದಿಂದ ಆಯೋಜಿಸಲಾದ ಯೋಗ ಸಂಭ್ರಮ ಎಲ್ಲರ ಮನ ಗೆದ್ದಿತು.
ಸ್ವಾಸ್ತಿಕ್ ಯೋಗವು ಆರೋಗ್ಯ, ಸಂತೋಷ ಹಾಗೂ ಸಮಗ್ರ ಜೀವನಶೈಲಿಯನ್ನು ಜನರಿಗೆ ತಲುಪಿಸುವ ಕಾರ್ಯವನ್ನು ನಿರಂತರವಾಗಿ ಮುಂದುವರಿಸುತ್ತಿದೆ.


