
ಸೂಲಿಬೆಲೆ : ದೇಶದಲ್ಲಿ ನಿಷೇಧಿತ ಮಾದಕ ವಸ್ತುಗಳು ಸೇವನೆ ಕಾನೂನು ಬಾಹಿರವಾಗಿದ್ದು, ಇವುಗಳ ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿ ತನ್ನ ನರಮಂಡಲದ ಮೇಲಿನ ಹತೋಟಿಯನ್ನು ಕಳೆದುಕೊಂಡು ಸಮಾಜ ಬಾಹಿರ ಚಟುವಟಿಕೆಗಳಿಗೆ ಕಾರಣನಾಗುತ್ತಾನೆ. ಮಾದಕ ವಸ್ತುಗಳ ಬಗೆ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕು ಎಂದು ಹೊಸಕೋಟೆ ಉಪ ವಿಭಾಗದ ಡಿವೈಎಸ್ಪಿ ಮಲ್ಲೇಶ್ ಹೇಳಿದರು.
ಸೂಲಿಬೆಲೆ ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಸೂಲಿಬೆಲೆ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ವಿರೋಧಿ ಸಪ್ತಾಹ ಆಚರಣೆ ಹಾಗೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕರ‍್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯ ತನ್ನ ಮೇಲಿನ ನಿಯಂತ್ರಣ ಕಳೆದುಕೊಂಡು ಕೊಲೆ, ಅತ್ಯಾಚಾರ, ಗಲಾಟೆ. ಘರ್ಷಣೆಯಂಥ ಕಾನೂನು ಬಾಹಿರ ಚಟುವಟಿಕೆಗಳಿಗೆ ತುತ್ತಾಗುತ್ತಾನೆ.ಇಂಥ ಪದಾರ್ಥಗಳ ಬಗೆ ವಿದ್ಯಾರ್ಥಿಗಳು ಜಾಗೃತಿಯನ್ನು ಹೊಂದಿರಬೇಕು. ಯೂಟ್ಯೂಬ್, ಮೊಬೈಲ್, ಟಿವಿಗಳಿಂದ ದೂರವಿದ್ದು, ನಿತ್ಯ ಪತ್ರಿಕೆಯನ್ನು ಓದುವಂತ ಹವ್ಯಾಸವನ್ನು ಬೆಳೆಸಿಕೊಂಡು ಜ್ಞಾನ ಹೆಚ್ಚಿಸಿಕೊಳ್ಳಿ. ಹೆತ್ತವರಿಗೆ, ಗುರುಗಳಿಗೆ ಗೌರವಕೊಡುವ ಮನೋಭಾವ ಬೆಳೆಸಿಕೊಳ್ಳಬೇಕು. ಹೆಣ್ಣು ಮಕ್ಕಳು ೧೮ಕ್ಕಿಂತ ಕಡಿಮೆ ವಯಸ್ಸಿಗೆ ಮದುವೆಯಾಗುವುದು ಕಾನೂನು ಬಾಹಿರವಾಗಿದ್ದು, ಪ್ರೀತಿ,ಪ್ರೇಮದ ಹೆಸರಿನಲ್ಲಿ ಜೀವನ ಹಾಳು ಮಾಡಿಕೊಳ್ಳಬೇಡಿ. ವಿದ್ಯಾರ್ಥಿಗಳು ಓದಿ ಏನಾದರೂ ಸಾಧನೆ ಮಾಡಬೇಕು ಎಂಬ ದೃಷ್ಟಿಯನ್ನಿಟ್ಟುಕೊಂಡು ಶಿಕ್ಷಣ ಪಡೆಯಬೇಕೆ ವಿನಃ ಕಾಲೇಜಿಗೆ ಬಂದ್ಮೇಲೆ ನಿಮ್ಮ ಮನಸು ಬೇರೆ ವಿಷಯಗಳತ್ತ ಹೋಗದಂತೆ ಜಾಗೃತಿ ವಹಿಸಿ. ಕಲಿಕೆಯ ವೇಳೆ ಮಾಡುವ ತಪ್ಪು ಮುಂದೆ ನಿಮ್ಮ ಜೀವನದಲ್ಲಿ ಪಶ್ಚಾತಾಪಕ್ಕೆ ಕಾರಣವಾಗದಂತೆ ಎಚ್ಚರ ವಹಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸೂಲಿಬೆಲೆ ಪೊಲೀಸ್ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ರಾಜಣ್ಣ ಮಾತನಾಡಿ, ನಿಮ್ಮ ಸುತ್ತಮುತ್ತ ಪ್ರದೇಶದಲ್ಲಿ ಗಾಂಜಾ, ಅಪೀಮುನಂತ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಕಂಡು ಬಂದಲ್ಲಿ ೧೧೨ ಅಥವಾ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ಯುವ ಪೀಳಿಗೆಯವರನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲವರು ಈ ದಂಧೆಯನ್ನು ನಡೆಸುತ್ತಾರೆ.ಒಮ್ಮೆ ಈ ವ್ಯಸನಕ್ಕೆ ಬಿದ್ದ ಇಡೀ ಜೀವನವನ್ನು ಹಾಳು ಮಾಡಿಕೊಳ್ಳುತ್ತಾನೆ. ಇಂಥ ದುಶ್ಚಟಗಳಿಂದ ವಿದ್ಯಾರ್ಥಿಗಳು ದೂರ ಇರಬೇಕು ಎಂದು ತಿಳಿಸಿದರು

ಜಾಗೃತಿ ಜಾಥಾ : ಕಾಲೇಜು ವಿದ್ಯಾರ್ಥಿಗಳು, ಪೊಲೀಸರು ಸೂಲಿಬೆಲೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಮಾದಕ ವಸ್ತುಗಳ ಬಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಜಾಗೃತಿ ಜಾಥಾ ನಡೆಸಿದರು.ಇದರ ವಿರುದ್ದ ಘೋಷಣೆಗಳನ್ನು ಕೂಗಿ ಅರಿವು ಮೂಡಿಸಿದರು
ಕರ‍್ಯಕ್ರಮದಲ್ಲಿ ಪ್ರಾಂಶುಪಾಲ ಮಂಜುನಾಥ್, ಮಾನವ ಹಕ್ಕುಗಳ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷ ಎಂ.ಆರ್ ಉಮೇಶ್, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯ ಜೀಯಾವುಲ್ಲಾ, ಹೊಸಕೋಟೆ ತಾಲೂಕು ಕಾನೂನು ಸೇವಾ ಪ್ರಾಧಿಕಾರ ಪಿಎಲ್‌ವಿ ಪ್ರಶಾಂತ್, ಉಪನ್ಯಾಸಕರು ಹಾಜರಿದ್ದರು.

