ಹೊಸಕೋಟೆ : ಒಕ್ಕಲಿಗರ ಉದ್ಯಮಗಳನ್ನು ಬೆಳೆಸಲು ಪರಸ್ಪರ ಸಹಕಾರವನ್ನು ಎಫ್‌ಸಿ ಫಸ್ಟ್ ಸರ್ಕಲ್ ನೀಡುತ್ತಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ಉದ್ಯಮಗಳಾಗಿ ಬೆಳೆಯಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು
ಹೊಸಕೋಟೆ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಎಫ್‌ಸಿ ಹೊಸಕೋಟೆ ಫಸ್ಟ್ ಸರ್ಕಲ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದಲ್ಲಿ ನಾಯಕತ್ವ ಸ್ಥಾನವನ್ನು ಒಕ್ಕಲಿಗ ಸಮುದಾಯ ಉಳಿಸಿಕೊಂಡು ಬಂದಿದ್ದು, ಉದ್ಯಮದತ್ತ ಒಕ್ಕಲಿಗರನ್ನು ಪ್ರೋತ್ಸಾಹಿಸಲು ವೇದಿಕೆಯನ್ನು ಒದಗಿಸುತ್ತಿರುವ ಫಸ್ಟ್ ಸರ್ಕಲ್ ಸಮುದಾಯ ಆರ್ಥಿಕವಾಗಿ ಬೆಳೆಯಲು ಸಹಕಾರಿಯಾಗಿದೆ. ಉದ್ಯಮ ಸ್ಥಾಪನೆಯಿಂದ ಹತ್ತಾರು ಮಂದಿಗೆ ಉದ್ಯೋಗ ನೀಡುವುದರ ಜತೆಗೆ ಅರ್ಥಿಕವಾಗಿ ಶಕ್ತಿವಂತರಾಗಬಹುದು. ಹೊಸಕೋಟೆ ತಾಲೂಕಿನಲ್ಲಿ ಸಮುದಾಯದವರು ಕಡಿಮೆ ಸಂಖ್ಯೆಯಲ್ಲಿ ಉದ್ಯಮಿಗಳಿದ್ದು, ಇದರ ಸಂಖ್ಯೆ ಹೆಚ್ಚಾಗಬೇಕು ಎಂದರು.
ರಾಜ್ಯ ಫಸ್ಟ್ ಸರ್ಕಲ್ ಚೀಪ್ ಮೆಂಟರ್ ಜಯರಾಮ್ ರಾಯಪುರ ಮಾತನಾಡಿ, ರಾಜ್ಯದಲ್ಲಿ ಒಕ್ಕಲಿಗರ ಕೇವಲ ಭೂಮಿಯನ್ನು ನಂಬಿ ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ರಾಜಕೀಯ, ಸಾಮಾಜಿಕ ಶಕ್ತಿಬೇಕು ಅಂದರೆ ಆರ್ಥಿಕ ಶಕ್ತಿ ಬೇಕು. ಆರ್ಥಿಕವಾಗಿ ಬೆಳೆಯಲು ಉದ್ಯಮಿಗಳಾಗಬೇಕು. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಫಸ್ಟ್ ಸರ್ಕಲ್‌ಗೆ ಚಾಲನೆ ನೀಡಿ ಶಾಖೆಗಳನ್ನು ಪ್ರಾರಂಭಿಸುತ್ತಿದ್ದೇವೆ. ಇದರ ಮೂಲಕ ಹೊಸ ಉದ್ಯಮಿಗಳಿಗೆ ಪ್ರೋತ್ಸಾಹಿಸ ನೀಡಿ ಸಂಘಟನೆಯನ್ನು ಕಟ್ಟಲು ಹೊಸ ಚೈತನ್ಯ ಸಿಕ್ಕಿದೆ ಎಂದರು.
ರಾಜ್ಯಾಧ್ಯಕ್ಷ ಮುನಿರಾಜು ಮಾತನಾಡಿ, ಸಮುದಾಯದ ಮುಂದಿನ ಪೀಳಿಗೆಗೆ ಹೆಚ್ಚು ಉದ್ಯಮಗಳನ್ನು ಸ್ಥಾಪನೆ ಮಾಡಬೇಕಿದೆ. ರಾಜ್ಯದಲ್ಲಿ ೧೭ ಸರ್ಕಲ್ ಮಾಡಿದ್ದು, ಮುಂದಿನ ದಿನಗಳಲ್ಲಿ ಇದರ ಸಂಖ್ಯೆಯನ್ನು ಹೆಚ್ಚಿ ಹೊಸ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.
ಹೊಸಕೋಟೆ ಫಸ್ಟ್ ಸರ್ಕಲ್ ನೂತನ ಅಧ್ಯಕ್ಷ ಡಾ.ಕೆ ನಾಗರಾಜ್ ಮಾತನಾಡಿ, ಒಕ್ಕಲಿಗರು ಜಮೀನುಗಳನ್ನು ಮಾರಾಟಮಾಡಬೇಡಿ. ಒಕ್ಕಲಿಗ ಸಮುದಾಯ ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಬೆಳೆಯಲು ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳುವುದು ಮುಖ್ಯ. ಉದ್ಯಮಗಳನ್ನು ಸ್ಥಾಪಿಸಿ ಸಮುದಾಯವನ್ನು ಬೆಳೆಸಬೇಕು ಎಂದರು
ಜಿಲ್ಲಾಧ್ಯಕ್ಷ ನಟರಾಜ್, ಹಿರಿಯ ಮುಖಂಡ ಬಿ.ಎನ್ ಗೋಪಾಲಗೌಡ, ಕೋಲಾರ ಶ್ರೀನಾಥ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಹೊಸಕೋಟೆ ಫಸ್ಟ್ ಸರ್ಕಲ್ ಪದಾಧಿಕಾರಿಗಳ ಪದಗ್ರಹಣ ನಡೆಯಿತು.
ಉದ್ಯಮಿ ಬಿ.ವಿ ಬೈರೇಗೌಡ.ಟಿಎಪಿಎಂಎಸ್ ಅಧ್ಯಕ್ಷ ಕೆ.ಸುರೇಶ್, ಬಮೂಲ್ ನಿರ್ದೇಶಕ ಕೆ.ಕೃಷ್ಣಮೂರ್ತಿ, ಹಿರಿಯ ಮುಖಂಡ ತಮ್ಮೇಗೌಡ, ಎಫ್‌ಸಿ-ಹೊಸಕೋಟೆ ಫಸ್ಟ್ ಸರ್ಕಲ್ ಕಾರ್ಯದರ್ಶಿ ಸೋಮಣ್ಣ, ತಾಪಂ ಮಾಜಿ ಇಒ ಡಾ.ನಾರಾಯಣಸ್ವಾಮಿ, ಡಾ.ವರದರಾಜು, ಅಂಬರೀಶ್, ಶಂಕರ್ ನಾರಾಯಣ್, ನರೇಂದ್ರಪ್ಪ, ಯೋಜನಾ ಪ್ರಾಧಿಕಾರ ನಿರ್ದೇಶಕ ಕೊರಳೂರು ಸುರೇಶ್, ಹಾಗೂ ಸಮುದಾಯದ ಮುಖಂಡರು ಹಾಜರಿದ್ದರು.


