
ಹೊಸಕೋಟೆ : ನಗರದ ಕಸದ ಸಮಸ್ಯೆ ಬಗೆಹರಿಸಲು ನಗರಸಭೆ ನೂತನ ನಿಯಮಾವಳಿಗಳನ್ನು ಜಾರಿ ಮಾಡಿದೆ. ಘನತ್ಯಾಜ್ಯ ವಸ್ತುಗಳ ಸಂಗ್ರಹಣೆ ಹಾಗೂ ವಿಲೇವಾರಿ ನಿಯಮ ೨೦೨೫ ನ್ನು ಜಾರಿ ಮಾಡಲಾಗಿದ್ದು,ಸ್ವಚ್ಚತೆ ನಿರ್ವಹಣೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ನಗರಸಭೆ ಆಯುಕ್ತರಾದ ನೀಲಲೋಚನ ಪ್ರಭು ಹೇಳಿದರು
ಹೊಸನಿಯಮಗಳ ಜಾರಿ ಸಂಬ0ಧ ಹೊಸಕೋಟೆ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಅರಿವು ಮೂಡಿಸುವ ಕರ‍್ಯಕ್ರಮದಲ್ಲಿ ಅವರು ಮಾತನಾಡಿದರು.
ನಗರದ ಜಿಕೆಬಿಎಂಎಸ್ ಶಾಲೆ, ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ನಗರದ ರಾಯ್ ಸಿಂಗ್ ಬಡಾವಣೆಗಳಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸವನ್ನು ನಗರಸಭೆ ವತಿಯಿಂದ ಮಾಡಲಾಗಿದೆ.ನಗರದ ವಿವಿಧ ಬಡಾವಣೆಗಳಲ್ಲಿರುವ ಸಾರ್ವಜನಿಕರಿಗೆ ಅರಿವು ಮೂಡಿಸುವ ಕರ‍್ಯವನ್ನು ಮಾಡಲಾಗುವುದು.ನಿಯಮಗಳನ್ನು ಪಾಲಿಸುವ ಮೂಲಕ ಜನರು ನಗರದ ಸ್ವಚ್ಚತೆಗೆ ಕೈ ಜೋಡಿಸಬೇಕು ಎಂದರು
ನಗರಸಭೆ ಆರೋಗ್ಯ ಅಧಿಕಾರಿ ಆಂಜಿನಪ್ಪ ಮಾತನಾಡಿ, ಕಸ ವಿಲೇವಾರಿಗೆ ಈ ಮೊದಲು ಒಣ ಕಸ ಹಾಗೂ ಹಸಿ ಕಸಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ನಗರಸಭೆ ಕಸ ಸಂಗ್ರಹ ವಾಹನಕ್ಕೆ ನೀಡಬೇಕಿತ್ತು. ಆದರೆ, ನೂತನ ನಿಯಮಾವಳಿಗಳ ಪ್ರಕಾರ ಕಸದಲ್ಲಿ ನಾಲ್ಕು ಪ್ರತ್ಯೇಕ ವಿಂಗಡಣೆ ಜಾರಿಯಾಗಿದ್ದು, ಒಣ ಕಸ ಮತ್ತು ಹಸಿ ಕಸದ ಜತೆಗೆ ನೈರ್ಮಲ್ಯ ತ್ಯಾಜ್ಯದ ಜತೆ ವಿಶೇಷ ಕಾಳಜಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಣೆ ಮಾಡಬೇಕಿದೆ. ಹಸಿ ಕಸದಲ್ಲಿ ಅಡುಗೆ ಮನೆ ಕಸ, ಹಣ್ಣು ತರಕಾರಿ, ತೋಟದ ತ್ಯಾಜ್ಯ. ಒಣಕಸದಲ್ಲಿ ಪ್ಲಾಸ್ಟಿಕ್ ಬಾಟಲಿ, ಕಾಗದ, ಗಾಜಿನ ಬಾಟಲಿಯಂತಹ ತ್ಯಾಜ್ಯ. ನೈರ್ಮಲ್ಯ ತ್ಯಾಜ್ಯದಲ್ಲಿ ಡೈಪರ್, ಪ್ಯಾಡ್ ಹಾಗೂ ಬ್ಯಾಂಡೇಜ್ ನಂತಹ ವಸ್ತುಗಳು ಹಾಗೂ ವಿಶೇಷ ಕಾಳಜಿ ತ್ಯಾಜ್ಯಗಳಾದ ಕೀಟ ನಾಶಕ ತ್ಯಾಜ್ಯ, ಬ್ಯಾಟರಿ ತ್ಯಾಜ್ಯಗಳಾದ ಆಸ್ಪತ್ರೆಯ ಸಿರಂಜು, ಸೂಜಿ, ಔಷಧಿ ತ್ಯಾಜ್ಯಗಳನ್ನು ಇನ್ನು ಮುಂದೆ ಪ್ರತ್ಯೇಕವಾಗಿ ವಿಂಗಡಿಸುವುದರ ಮೂಲಕ ನಗರಸಭೆ ಕಸ ಸಂಗ್ರಹ ವಾಹನಗಳಿಗೆ ಪ್ರತ್ಯೇಕವಾಗಿ ನೀಡಬೇಕೆಂದು ತಿಳಿಸಿದರು.
ಸಾರ್ವಜನಿಕ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಟೌನ್ ಬ್ಯಾಂಕ್ ನಿರ್ದೇಶಕ ಎಚ್.ಎಸ್ ಗೋಪಾಲ್ ಮುರುಗೇಶ್, ಮುಖಂಡರಾದ ಮಂಜುನಾಥ್, ಸೂರ್ಯ, ನಗರಸಭೆ ಸಿಬ್ಬಂದಿಗಳಾದ ರಮೇಶ್, ಕಣ್ಣಪ್ಪ, ಅಮೃತ, ಕವಿತ, ಶೈಲಜ ಹಾಜರಿದ್ದರು.


